ಸಂಘದ ಸಾಲಗಾರರಾಗದೆ ಠೇವಣಿದಾರರಾಗಲು ಗುರುನಾಥ ಜಾಂತಿಕರ ಕರೆ

ಬೀದರ:ಏ.8:ಮನುಷ್ಯ ಸಂಘ ಜೀವಿ. ಸಹಕಾರ ಸಹಬಾಳ್ವೆ ಬದ್ಧತೆಯ ಜೀವನದಿಂದ ಸಂಘ, ಸಂಸ್ಥೆ ವಿಕಸಿತಗೊಳ್ಳಲು ಸಾಧ್ಯ ಎಂದು – ಗುರುನಾಥ ಜಾಂತಿಕರ ವಚನ ಸೌಹಾರ್ದ ಸಹಕಾರ ಸಂಘ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಮನ್ನಳ್ಳಿ ರಸ್ತೆಯಲ್ಲಿಯ ಪೋಲಾ ಕನ್‍ವೆನಶನ್ ಹಾಲ್ ನಲ್ಲಿ ವಚನ ಸೌಹಾರ್ದ ಸಹಕಾರ ಸಂಘ ಕಾರ್ಯಚಟುವಟಿಕೆ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಸಸಿಗೆ ನೀರೆರೆದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕರಾದ ಗುರುನಾಥ ಜಾಂತಿಕರ ಉದ್ಘಾಟಿಸಿ - ಹುಟ್ಟಿನಿಂದ ಸಾಯುವರೆಗೆ ಸಹಕಾರ ಅನಿವಾರ್ಯ. ನೂರಾರು ಜನರು ಒಗ್ಗಟಿನಿಂದಾಗಿ ಹತ್ತಾರು ಜನರಿಗೆ ಸಂದಿಗ್ಧತೆಯ ಕಾಲದಲ್ಲಿ ಸಹಕರಿಸುವುದೆ ಸೌಹಾರ್ದತೆಯ ಸಹಕಾರ ಎಂದು ನುಡಿದರು. 
ಸಹಕಾರದ ಮೂಲ ಆಶಯ ಸಹಕಾರಿಗಳ ಅಭಿವೃದ್ಧಿ ಜೊತೆಗೆ ಸಮಾಜದ ಪರಿವರ್ತನೆಗೊಳಿಸುವಿಕೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಂಡಾಗ ಬಸವಣ್ಣನವರ ಆಶಯ ಪೂರೈಸಿದಂತಾಗುತ್ತದೆ. ಶೇರುದಾರರು ಸಾಲಕ್ಕೆ ಸೀಮಿತಗೊಳ್ಳದೆ ಠೇವಣಿದಾರರಾಗಿ ಸಾಮಾಜಿಕ ಭದ್ರತೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ 160 ಸಂಘಗಳು ನೋಂದಾವಣಿಯಾದರು 10 ಸಂಘಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ. ವಚನ ಸೌಹಾರ್ದ ಹೆಸರಿಗೆ ತಕ್ಕಂತೆ ನಿರ್ದೇಶಕರು ಕಾವಲುಗಾರರಾಗಿ ಶೇರುದಾರರಿಗೆ ಸಹಕರಿಸಬೇಕು. ಶೇರುದಾರರು ನಿಗದಿತ ಅವಧಿಯೊಳಗೆ ಬದ್ಧತೆಯಿಂದ ಪಡೆದ ಹಣ ಹಿಂತಿರುಗಿಸಿ ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಸಲಹೆ ನೀಡಿದರು. 
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ವಿಠಲರೆಡ್ಡಿ ಯಡಮಲೆ ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರು, ಶೇರುದಾರರು ಸಮನ್ವತೆಯಿಂದ ಕೆಲಸ ನಿರ್ವಹಿಸಬೇಕು. ಸಾಮರಸ್ಯದ ಜೀವನ ಸಂಘದ ಬಲವರ್ಧನೆಗೆ ಪ್ರೇರಣೆ. ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿಯ ಆರ್ಥಿಕ ಕ್ರಾಂತಿಗೆ ಹೆಸರುವಾಸಿ. ಸ್ವ-ಸಹಾಯ ಸಂಘಗಳು ಇಂದು ದೊಡ್ಡ ಕ್ರಾಂತಿ ಮಾಡಿವೆ. ಸಂಘವು ಸಬಲಗೊಂಡರೆ ಇಡಿ ಶೇರುದಾರರಿಗೆ ಅದರ ಗೌರವಸಲ್ಲುತ್ತದೆ. ನಮ್ಮ ಬ್ಯಾಂಕಿನಿಂದ ಬೇಕಾಗುವ ಸಹಕಾರ ನೀಡುತ್ತೇವೆಂದು ನುಡಿದರು. 
ಸಂಘದ ಉಪಾಧ್ಯಕ್ಷರಾದ ಪ್ರಕಾಶ ಗಂದಿಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ ಹಣಕಾಸು ನಿರ್ವಹಣೆ ಹಾಗೂ ವಚನಗಳಿಗೆ ಸಾಮಿಪ್ಯವಿದೆ. ಜಗತ್ತಿನ ಏಳಿಗೆ ಹಣಕಾಸು ನಿರ್ವಹಣೆಯ ಮೇಲೆ ಅವಲಂಬಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟದ ಬದುಕಿಗೆ ಸ್ಪಂಧಿಸಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದು ನುಡಿದರು. 
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ ಗಂದಗೆ ಮುಖ್ಯ ಅತಿಥಿಗಳಾಗಿ ವಚನ ಸೌಹಾರ್ದ ಸಹಕಾರ ಸಂಘದಲ್ಲಿ ಎಲ್ಲರು ವಚನ ಬದ್ಧತೆ ಉಳ್ಳವರಾಗಿದ್ದಾರೆ. ಅನೇಕ ಹಿರಿಯರು ಅಪ್ಪಟ ಬಸವ ಪರಂಪರೆ ವೈಚಾರಿಕತೆ ನೆಲೆಗಟ್ಟಿನ ಹಿರಿಯರು ಒಂದೆಡೆಯಾದರೆ ಯುವಕರ ಸಮೂಹ ಮತ್ತೊಂದೆಡೆಯಾಗಿದೆ. ಹೀಗಾಗಿ ಸಮನ್ವಯತೆಯಿಂದ ಅನೇಕ ಉದ್ಯೋಗ ಹಾಗೂ ಸ್ವಾವಲಂಬಿ ಜೀವನ ನಡೆಸಲು ಚಿಕ್ಕ-ಚಿಕ್ಕ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ತಮ್ಮ ಅನುಭವ ಹಂಚಿಕೊಂಡರು. 
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಶಿವಕುಮಾರ ಸಾಲಿ, ಅಧ್ಯಕ್ಷತೆ ವಹಿಸಿದರೆ. ಬಸವಕಲ್ಯಾಣ ಬಸವಧರ್ಮ ಪೀಠದ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ವೈಜಿನಾಥ ಸಜ್ಜನಶೆಟ್ಟಿ ಪ್ರಾರ್ಥನೆ ನಡೆಸಿಕೊಟ್ಟರು. ಮೊದಲಿಗೆ ಡಾ. ಸುರೇಶ ಪಾಟೀಲ ಸ್ವಾಗತಿಸಿದರೆ, ಪ್ರಕಾಶ ಮಠಪತಿ ವಂದಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು. ಸಮಾರಂಭದಲ್ಲಿ ನ್ಯಾಯವಾದಿಗಳಾದ ಜಗನ್ನಾಥ ಸೋರಳ್ಳಿ, ಸಂಜೀವಕುಮಾರ ಪಾಟೀಲ, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ ಅವರಿಗೆ ಗೌರವಿಸಲಾಯಿತು. ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಅಲ್ಲಮಪ್ರಭು ನಾವದಗೇರೆ, ಶಿವಶಂಕರ ಟೋಕರೆ, ಮಲ್ಲಿಕಾರ್ಜುನ ಸ್ವಾಮಿ, ಸಂಜೀವಕುಮಾರ ಬಿರಾದಾರ, ಪ್ರದೀಪ ವಿಸಾಜಿ, ಸುನೀಲಕುಮಾರ ಭಂಡೆ, ಸದಾನಂದ ಹಂಗರಗಿಕರ, ಶರಣಬಸಪ್ಪ ಟೊಳ್ಳೆ, ಶ್ವೇತಾ ಸಂಗಾರೆಡ್ಡಿ, ಪ್ರತಿಭಾ ವೀರಪ್ಪ ಜೀರ್ಗೆ, ಮಹಾದೇವಿ ಗುರುಶಾಂತಪ್ಪ ನಿಗದಳ್ಳಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಆನಂದಕುಮಾರ ಬೆಡಸೂರೆ ಅವರಿಗೆ ಸನ್ಮಾನಿಸಲಾಯಿತು. ಕೊನೆಯಲ್ಲಿ ಸಾಂಕೇತಿಕವಾಗಿ 20 ಜನರಿಗೆ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.