ಸಂಘಟನೆಯ ಒಗ್ಗಟ್ಟಿಗೆ ಮಾನವ ಸಂಬಂಧಗಳಲ್ಲಿ ಔದಾರ್ಯ ಬೇಕು; ಸಿದ್ದರಾಮೇಶ್ವರ ಶ್ರೀ

 ದಾವಣಗೆರೆ.ಸೆ.೨೦: ಸಂಘಟನೆ ಒಗ್ಗಟ್ಟು, ಏಕತೆ, ಐಕ್ಯತೆ ಎಂಬುದು ಔಪಚಾರಿಕವಾಗದೇ ಔಚಿತ್ಯವಾಗಬೇಕು. ಇದಕ್ಕೆ ಮಾನವ ಸಂಬAಧಗಳಲ್ಲಿ ಔದಾರ್ಯ ಬೇಕು ಎಂದು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ನಗರದ ಭೋವಿ ವಿದ್ಯಾರ್ಥಿ ನಿಲಯದ ವತಿಯಿಂದ ಏರ್ಪಡಿಸಲಾಗಿದ್ದ ಗಜಾನನ ಉತ್ಸವದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಜನರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಜಾನನ ಉತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಬಾಲಗಂಗಾಧರನಾಥ ತಿಲಕರು ಮಾರ್ಪಡಿಸಿದರು. ಗಣಪತಿ ಉತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿ ಬ್ರಿಟಿಷರ ದಾಸ್ಯದಿಂದ ಬಿಡುಗೊಡೆಗೊಳಿಸಲು ಏಕತೆಯನ್ನು ಸಾಧಿಸುವ ತಿಲಕ್ ಅವರ ಪ್ರಯತ್ನ ಧರ್ಮಜಾಗೃತಿಯ ಜೊತೆಗೆ ಜಾತಿ, ಧರ್ಮಗಳನ್ನು ಮೀರಿದ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು ಎಂದು ತಿಳಿಸಿದರು.ಸ್ವಾತಂತ್ರ‍್ಯೋತ್ಸಕ್ಕೆ ನಾಂದಿ ಹಾಡಿದ ಗಣೇಶ ಉತ್ಸವವು ಇಂದು ಜಾತಿಯ ಎಲ್ಲೆಮೀರಿ ನಡೆಯುತ್ತದೆ. ತಿಲಕ್ ರವರ ಆಶಯದಂತೆ ಸುಖ, ಶಾಂತಿ, ಸಮೃದ್ದಿಯನ್ನು ಪರಸ್ಪರ ಸಹಬಾಳ್ವೆ ಸಹಕಾರದಿಂದ ಜರುಗುವ ಸಾರ್ವಜನಿಕ ಉತ್ಸವಗಳಲ್ಲಿ ಕಾಣಸಿಗಬೇಕು. ಹಾಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಒಂದು ನಿರ್ದಿಷ್ಟ ಜಾತಿಯ ಜನರನ್ನು ಒಳಗೊಂಡಿರುವ ಉತ್ಸವಾಗಿ ಉಳಿಯದೆ, ಅದರಲ್ಲಿ ಜಾತ್ಯಾತೀತ ಬಾಂಧವರು ಕೂಡ ಸಕ್ರಿಯವಾಗಿ ಗುರುತಿಸಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ಸಣ್ಣತನ, ಸಂಕುಚಿತ ಭಾವವನ್ನು ಮೀರಿದ ಬೆಸುಗೆಯೇ ಆಗಿದೆ ಎಂದು ಹೇಳಿದರು.