ಸಂಘಟನೆಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಲಿ:ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ಸೆ.13:ಸಂಘಟನೆಗಳು ಸಮಾಜದಲ್ಲಿ ದುರ್ಬಲರು,ಶೋಷಿತರು,ನೊಂದ ಮಹಿಳೆಯರು ಹಾಗೂ ಅನ್ಯಾಯಕ್ಕೊಳಗಾಗುವ ರೈತರ ಪರವಾಗಿ ಗಟ್ಟಿ ಧ್ವನಿ ಎತ್ತುವ ಕಾರ್ಯ ಮಾಡಬೇಕು ಎಂದು ಕೊಣ್ಣೂರಿನ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಜಯ ಕರ್ನಾಟಕ ಸಂಘಟನೆಯ ನೂತನ ಕಛೇರಿ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಚೇಗೆ ತಾಲೂಕಿನಲ್ಲಿ ಸುರಿ ಭಾರೀ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದು ರೈತರ ಜಮೀನುಗಳಲ್ಲಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಜಲಾವೃತವಾಗಿದೆ.ಜನಸಂಚಾರಕ್ಕೆ ಇದ್ದ ಸೇತುವೆಗಳು ನೀರಲ್ಲಿ ಕೊಚ್ಚಿ ಹೋಗಿವೆ.ಬೆಳೆಗೆ ಕೋರಿ ಹುಳುವಿನ ಬಾಧೆ ಹೆಚ್ಚಾಗಿದ್ದು ನೊಂದ ರೈತರ ಪರ ಸಂಘಟನೆಗಳು ಧ್ವನಿಯಾಗಲಿ.ಅಸ್ಕಿ ಫೌಂಡೇಶನ್ ಸದಾ ನಿಮ್ಮ ಬೆಂಬಲಕ್ಕಿರಲಿದೆ ಎಂದರು.

ಪತ್ರಕರ್ತ ನಾರಾಯಣ ಮಾಯಾಚಾರಿ ಮಾತನಾಡಿ, ಕನ್ನಡಪರ ಸಂಘಟನೆಗಳೆಂದರೆ ಕೇವಲ ನವ್ಹೆಂಬರ್ ತಿಂಗಳಲ್ಲಿ ಮಾತ್ರ ಸಕ್ರಿಯರಾಗಿ,ಕಾರ್ಯಕ್ರಮ ನಡೆಸಿ ಬಿಟ್ಟರೆ ಜವಾಬ್ದಾರಿ ಮುಗಿಯುವುದಿಲ್ಲ.ನಾಡಿನ ನೆಲ,ಜಲ,ಭಾಷೆಯ ವಿಷಯ ಬಂದಾಗ ಗಟ್ಟಿಯಾಗಿ ನಿಂತು ಹೋರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಖಂಡ ಹುಸೇನ್ ಮುಲ್ಲಾ(ಕಾಳಗಿ) ಮಾತನಾಡಿ,ತಾಲೂಕಿನಲ್ಲಿ ಜಯಕರ್ನಾಟಕ ಸಂಘಟನೆ ಕಟ್ಟಿ ಬೆಳೆಸಲು ಹಲವರು ಕಾರಣೀಭೂತರಾಗಿದ್ದಾರೆ.ಈ ಸಂಘಟನೆಯಿಂದ ತಾಲೂಕಿನಲ್ಲಿ ಹಲವಾರು ಜನೋಪಯೋಗಿ ಕೆಲಸಗಳು ಹೋರಾಟದ ಮೂಲಕ ಆಗಿವೆ.ಮುಖಂಡರಾದ ದಿ.ಪ್ರಕಾಶ ಸಂಗಮ,ನಾರಾಯಣ ಮಾಯಾಚಾರಿ,ರವಿ ಜಗಲಿ,ಮಾರುತಿ ಹಿಪ್ಪರಗಿ ಮೊದಲಾದವರು ಸಂಘಟನೆ ಉನ್ನತಿಗಾಗಿ ಶ್ರಮಿಸಿದ್ದಾರೆ ಎಂದರು.

ಮುಖಂಡ ಪುಂಡಲೀಕ ಮುರಾಳ ಮಾತನಾಡಿದರು.ಜೈನಾಪೂರದ ದೇವಿ ಆರಾಧಕ ಲಾಲಲಿಂಗೇಶ್ವರ ಶರಣರು,ಲೊಟಗೇರಿ ವೇ.ಗುರುಮೂರ್ತಿ ಕಣಕಾಲಮಠ,ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ ನಾಯಕ,ಮುಖಂಡರಾದ ಮಲ್ಲಿಕಾರ್ಜುನ ನಾಡಗೌಡ,ವಕೀಲರಾದ ಪಿ.ಬಿ.ಮಾತಿನ,ಮುಖಂಡ ಮಾರುತಿ ಹಿಪ್ಪರಗಿ,ರವಿ ಜಗಲಿ,ಸಮಾಜ ಸೇವಕ ಮಹಾಂತೇಶ ಬೂದಿಹಾಳಮಠ,ಶಿವಪುತ್ರ ಅಜಮನಿ,ತಾಲೂಕಾಧ್ಯಕ್ಷ ಬಾಪುಗೌಡ ಪಾಟೀಲ್,ನೇತಾಜಿ ನಲವಡೆ,ವೀರೇಶ ಗುರುಮಠ,ಸಿದ್ಧರಾಜ ಹೊಳಿ,ಪ್ರಶಾಂತ ಕಾಳೆ,ಪರಶುರಾಮ ಸಿಂಧೆ,ಪ್ರವೀಣ ಸಂಗಮ,ರಾಜುಗೌಡ ತುಂಬಗಿ ಸೇರಿದಂತೆ ಜಯ ಕರ್ನಾಟಕ ಸಂಘಟನೆ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.ಹುಸೇನ್ ಮುಲ್ಲಾ ಸ್ವಾಗತಿಸಿದರು.ಶ್ರೀಶೈಲ ಹೂಗಾರ ನಿರೂಪಿಸಿದರು.