ಸಂಘಟನೆಗಳಿಗೆ ನೂತನ ಅಧ್ಯಕ್ಷರ ಆಯ್ಕೆ

ರಾಮದುರ್ಗ, ಮಾ27: ತಾಲೂಕಿನ ಎಲ್ಲ ಗ್ರಾಮಗಳ ಪರಿಶಿಷ್ಟ ಜಾತಿಯ ಜನ ದಲಿತ ಮುಖಂಡ ಬಿ.ಆರ್. ದೊಡಮನಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನೆನೆಗುದಿಗೆ ಬಿದ್ದಿದ್ದ ಸಂಘಟನೆಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷರನ್ನಾಗಿ ಕರಡಿಗುಡ್ಡ ಗ್ರಾಮದ ಗೋಪಾಲ ಮಾದರ ಅವರನ್ನು ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರನ್ನಾಗಿ ಬಟಕುರ್ಕಿ ಗ್ರಾಮದ ಯಲ್ಲಪ್ಪ ದುರಗಪ್ಪ ರೂಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಕಳೆದ ಹತ್ತಾರು ವರ್ಷದಿಂದ ದಲಿತರು ಸಂಘಟನೆ ಇಲ್ಲದೇ ತೊಂದರೆಗೊಳಗಾದವರಿಗೆ ನ್ಯಾಯ ಕೊಡಿಸಲು ಅಸಾಧ್ಯವಾಗಿತ್ತು. ಇದನ್ನು ಅರಿತ ಸಮಾಜದ ಮುಖಂಡರು ನೂತನ ಪದಾಧಿಕಾರಿಗಳನ್ನು ನೇಮಿಸಿ ತುಳಿತಕ್ಕೆ ಒಳಗಾದವರ ಸಹಾಯಕ್ಕೆ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ನಿರ್ಧರಿಸಿದರು.
ಈ ಸಾರಿಯ ಡಾ. ಬಿ.ಆರ್. ಅಂಬೇಡ್ಕರರ ಜಯಂತಿ ಮತ್ತು ಬಾಬು ಜಗಜೀವನ್‍ರಾಮ್‍ರ ಜಯಂತಿಯನ್ನು ಅದ್ದೂರಿಯಾಗಿ ಜರುಗಿಸಲು ಗ್ರಾಮೀಣ ಪ್ರದೇಶದಿಂದ ಜನರನ್ನು ಸೇರಿಸಲು ನಿರ್ಣಯಿಸಲಾಯಿತು.
ತಾಲ್ಲೂಕಿನ ಬಟಕುರ್ಕಿ, ಹುಲಕುಂದ, ಸುರೇಬಾನ, ಮನಿಹಾಳ, ಅವರಾದಿ, ಉಮತಾರ, ಹಳೆತೊರಗಲ್, ಗೊಣ್ಣಾಗರ, ಸಾಲಹಳ್ಳಿ, ಸಾಲಾಪೂರ, ಮೂಲಂಗಿ ಸೇರಿದಂತೆ ಎಲ್ಲ ಗ್ರಾಮಗಳಿಂದ ನೂರಾರು ದಲಿತ ಮುಖಂಡರು ಆಗಮಿಸಿದ್ದರು.
ಪ್ರಕಾಶ ಮಾದರ, ಮಂಜು ಮಾದರ, ಕೆಂಚಪ್ಪ ಮಾದರ, ಧರ್ಮಪ್ಪ ಮಾದರ, ಲಕ್ಕಪ್ಪ ಮಾದರ, ಮಾರುತಿ ಮಾದರ, ಮಾರುತಿ ಪೂಜೆರ ಸಭೆಯ ನೇತೃತ್ವ ವಹಿಸಿದ್ದರು.