ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಬಿಗಿ ಭದ್ರತೆ

ಬೆಳಗಾವಿ,ಜೂ.೫-ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆಯಾಗಿರುವ ಮಚ್ಚೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ಡಿಸಿಪಿ ಶೇಖರ್ ಹೆಚ್‌ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ತಾಲೂಕಿನ ಮಚ್ಚೆ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯಿಂದ ಸದ್ಯ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಜೀಜಾಮಾತಾ ಚೌಕ್‌ನಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಕಳೆದ ಹಲವು ವರ್ಷಗಳಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಕನ್ನಡಪರ ಸಂಘಟನೆಗಳು ಮನವಿ ಮಾಡಿದ್ದವು.
ಮತ್ತೊಂದು ಕಡೆ ಜೀಜಾಮಾತಾ ಅಥವಾ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸಲು ಮರಾಠಿ ಭಾಷಿಕರು ಮನವಿ ಮಾಡಿದ್ದರು. ಇದೆಲ್ಲದರ ನಡುವೆ ಇದೀಗ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆಗೆ ಸ್ಥಳದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಸದ್ಯ ಸಂಗೊಳ್ಳಿ ರಾಯಣ್ಣ ಮೂರ್ತಿ ಎದುರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಜಮಾವಣೆ ಆಗಿದ್ದು ಡಿಸಿಪಿ ಶೇಖರ್ ಹೆಚ್‌ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.