ಬೀದರ್: ಜೂ.22:ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ನಗರದ ಪ್ರತಿಷ್ಠಿತ ಶಾಲೆಯಾದ ಜ್ಞಾನಸುಧಾ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಂಗೀತ ಸುಧೆ ಹರಿಸಿದರು.
ವಿಶ್ವ ಸಂಗೀತ ದಿನದ ಅಂಗವಾಗಿ ಏರ್ಪಡಿಸಿದ್ದ ‘ಜಿಎಸ್‍ವಿ ಸರಿಗಮಪ’ ಕಾರ್ಯಕ್ರಮ ನಗರದ ಮಾಮನಕೇರಿಯಲ್ಲಿ ಇರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಸಂಗೀತ ಹಬ್ಬದ ವಾತಾವರಣ ನಿರ್ಮಿತಗೊಂಡಿತು. ಎರಡು ವಿಭಾಗದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಹಾಡುಗಳನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡುವ ಮೂಲಕ ಎಲ್ಲ ಪ್ರೇಕ್ಷರಿಗೆ ಸಂಗೀತದ ರಸದೌತಣ ನೀಡಿದರು.
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’, ‘ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನನ್ನ ಅಪ್ಪಯ್ಯ’, ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಕನ್ನಡ ನುಡಿ ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ’, ‘ತೆರಿ ಮಿಟ್ಟಿ ಮೆ ಮಿಲ್ ಜಾವ್’, ‘ಮೇರೆ ರಸ್ಕೆ ಕಮರ್ ತೂನೆ ಪಹೇಲಿ ನಜರ್’, ಮೇರೆ ನೈನ ಸವನ್ ಭಾಡೋ, ‘ಏ ರಾತೆ ಏ ಮೋಸಂ ನದೀ ಕಾ ಕಿನಾರ’, ಮತ್ತಿತರ ಸಿನಿಮಾ ಹಾಗೂ ಭಕ್ತಿ ಗೀತೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಚಪ್ಪಾಳೆಗೆ ಪಾತ್ರರಾದರು.
ಜಿಎಸ್‍ವಿ ಸರಿಗಮಪ ಸ್ಪರ್ಧೆ ಎರಡು ವಿಭಾಗದಲ್ಲಿ ಜರುಗಿದ್ದು, ಅಂತಿಮ ಸ್ಪರ್ಧೆಗೆ ಒಟ್ಟು 17 ವಿದ್ಯಾರ್ಥಿಗಳು ಆಯ್ದೆಯಾಗಿದ್ದರು.
5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳ ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಯುಕ್ತಿ ಗೌತಮ್ ಅರಳಿ ಪ್ರಥಮ ಬಹುಮಾನ, ಸಂಚಿತಾ ಕಿರಣ ಕೆ.ಪಿ. ದ್ವಿತೀಯ ಬಹುಮಾನ ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಾ ಅಲ್ಲಮಪ್ರಭು ತೃತೀಯ ಬಹುಮಾಮನ ಬಾಚಿಕೊಂಡರು.
8ನೇ ತರಗತಿಯಿಂದ 10ನೇ ತರಗತಿ ವರೆಗಿನ ಪ್ರೌಢ ಶಾಲೆ ವಿದ್ಯಾರ್ಥಿಗಳ ವಿಭಾಗದ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಶ್ರದ್ಧಾ ಅಮಿತ್ ಪ್ರಥಮ ಬಹುಮಾನ, ಶ್ರೀಶಾ ವೆಂಕಟೇಶ್ ದ್ವಿತೀಯ ಬಹುಮಾನ ಹಾಗೂ ಹರ್ಷ ಸಂತೋಷ ಬಿರಾದಾರ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.
ಇದಕ್ಕೂ ಮುಂಚೆ ಮಾತನಾಡಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಅವರು ‘ಸಂಗೀತ ಕಲೆ ನಮ್ಮ ಜೀವನದ ಒಂದು ಭಾಗವಾಗಿದೆ. ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕೆಂದರೆ ನಾವು ಸಂಗೀತವನ್ನು ಆಲಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರು ಮಾತನಾಡಿ, “ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಂಗೀತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಹಿಸುವ ದಿಸೆಯಲ್ಲಿ ವಿದ್ಯಾಲಯದಲ್ಲಿ ಪ್ರತಿವರ್ಷ ಜಿಎಸ್‍ವಿ ಸರಿಗಮಪ ಸ್ಪರ್ಧೆ ನಡೆಸಲಾಗುತ್ತಿದೆ. ಈ ಸ್ಪರ್ಧೆ ವಿದ್ಯಾರ್ಥಿಗಳಿಗೆ ತಮ್ಮಲ್ಲಿನ ಸಂಗೀತ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಸಂಗೀತಾಸಕ್ತಿ ಬೆಳೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಗಾಯಕರಾದ ಮಹೇಶ ಮೈಲೂರಕರ್ ಹಾಗೂ ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ ಅವರು ಭಾಗವಹಿಸಿದರು.