ಸಂಗೀತ ಶಿಕ್ಷಕರ ನೇಮಕಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ

ಕಲಬುರಗಿ,ಆ.6-ಸಂಗೀತ ಶಿಕ್ಷಕರ ನೇಮಕ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅಂತರರಾಷ್ಟ್ರೀಯ ಖ್ಯಾತಿಯ ಖ್ಯಾತ ಹಿಂದುಸ್ಥಾನಿ ಸಂಗೀತ ಕಲಾವಿದ ಪದ್ಮಶ್ರೀ ಡಾ.ಎಮ್.ವೆಂಕಟೇಶಕುಮಾರ್ ಅವರಿಗೆ ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ವತಿಯಿಂದ ಮನವಿ ಮಾಡಲಾಯಿತು.
ಈಚೆಗೆ ನಗರಕ್ಕೆ ಆಗಮಿಸಿದ ಪದ್ಮಶ್ರೀ ಡಾ.ಎಂ.ವೆಂಕಟೇಶಕುಮಾರ ಅವರನ್ನು ಸಂಘದ ರಾಜ್ಯಾಧ್ಯಕ್ಷ ಬಂಡಯ್ಯ ಹಿರೇಮಠ ಸುಂಟನೂರ ಅವರು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ ಕಳೆದ 12 ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮತ್ತು ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ಕಾರಣಕ್ಕೆ ಸಂಗೀತ ಶಿಕ್ಷಕರ ನೇಮಕಾತಿ ಮಾಡುವಂತೆ ರಾಜ್ಯ ಮತ್ತು ಕೆಂದ್ರ ಸರ್ಕಾರಕ್ಕೆ ಪತ್ರ ಬರೆದು ನೇಮಕಾತಿ ಮಾಡುವಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ವೆಂಕಟೇಶ ಕುಮಾರ ಅವರು ರಾಜ್ಯದಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಬೇಕು ಇದು ಬಹಳ ಅವಶ್ಯ ರಾಜ್ಯದಲ್ಲಿ ಬಹಳಷ್ಟು ಸಂಗೀತ ಪದವಿ ಪಡೆದ ಪದವೀಧರರು ಇದ್ದಾರೆ ಎಲ್ಲರಿಗೂ ಸರಕಾರಿ ಉದ್ಯೋಗ ಸಿಗುವಂತೆ ಆಗಬೇಕು ಕಂಡಿತಾ ನಾನು ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ತಿಳಿಸಿದರು.