ಕಲಬುರಗಿ,ಜು.19-ಸಂಗೀತ ಪದವೀಧರರಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮನವಿಪತ್ರ ಸಲ್ಲಿಸಲಾಯಿತು.
2006ರಲ್ಲಿ ಪ್ರಾಥಮಿಕ ಮತ್ತು 2009ರಲ್ಲಿ ಪ್ರೌಢ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ನಡೆದಿದ್ದು, ತದನಂತರ ಇಲ್ಲಿಯವರೆಗೂ ಸಂಗೀತ ಶಿಕ್ಷಕರ ನೇಮಕಾತಿ ಆಗಿರುವುದಿಲ್ಲ. ಸತತ 10 ವರ್ಷಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತ ಬರಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಸ್ವತ: ಅವರು ಕೂಡ ಕಲಾವಿದರಾಗಿದ್ದರಿಂದ ಅವರ ಕಾಲದಲ್ಲಿ ಸಂಗೀತ ಶಿಕ್ಷಕರ ನೇಮಕಾತಿಗೆ ಜೀವ ತುಂಬಿದ್ದರು. ಅದರಂತೆ ಸಂಗೀತ ಶಿಕ್ಷಕರ ನೇಮಕಾತಿ ಮಾಡಿ ಸಂಗೀತ ಪದವೀಧರರ ಬಾಳಿಗೆ ಬೆಳಕು ನೀಡಬೇಕು,ಕಳೆದ 14 ವರ್ಷಗಳಿಂದ ನೇಮಕಾತಿ ಆಗದೆ ಇರುವ ಕಾರಣ, ನೇಮಕಾತಿ ಮಾಡಿಕೊಳ್ಳುವಾಗ ವಯೋಮಿತಿ ಮೀರುತ್ತಿರುವವರಿಗೆ ಮೊದಲ ಆದ್ಯತೆ ನೀಡಬೇಕು.ಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕುವೆಂಪು ಶತಮಾನ ಮಾದರಿಯ ಶಾಲೆ, ಆದರ್ಶ ವಿದ್ಯಾಲಯ (ಆರ್.ಎಂ.ಎ) ಮತ್ತು ಕರ್ನಾಟಕ ಪಬ್ಲಿಕ್ ಶಾಲೆ (ಆಂಗ್ಲ ಮಾದ್ಯಮ) ಈ ಎಲ್ಲ ಶಾಲೆಗಳಲ್ಲಿ ಹೊಸದಾಗಿ ಸಂಗೀತ ಶಿಕ್ಷಕರ ಹುದ್ದೆಗಳು ಸೇರಿಸಬೇಕು. ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ರಾಜ್ಯ ಅಧ್ಯಕ್ಷ ಬಂಡಯ್ಯ ಹಿರೇಮಠ ಸುಂಟನೂರ, ಸಂಗೀತ ಪದವೀಧರರಾದ ಜಗದೀಶ ದೇಸಾಯಿ ಕಲ್ಲೂರ, ವೀರಭದ್ರಯ್ಯ ಸ್ಥಾವರಮಠ, ಅಣ್ಣಾರಾವ ಮತ್ತಿಮಡು, ಚಂದ್ರಕಾಂತ ಗುಳಗಿ, ನರಸಿಂಹ ಅರುಲಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಗೀತ ಪದವೀಧರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.