ಸಂಗೀತ, ನಾಟಕಗಳಿಂದ ಸಹೃದಯರ ಮನಸ್ಸಿಗೆ ಉಲ್ಲಾಸ- ಸಿದ್ದಲಿಂಗೇಶ ರಂಗಣ್ಣನವರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.01. ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಹೃದಯರ ಮನಸ್ಸುಗಳು ಉಲ್ಲಸಿತಗೊಂಡು ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗುತ್ತವೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣನವರ ಅವರು ತಿಳಿಸಿದ್ದಾರೆ.
ಅವರು ಸ್ಥಳೀಯ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಸಂಡೂರು ತಾಲ್ಲೂಕಿನ ಎಂ.ಬಸಾಪುರ ಗ್ರಾಮದ ರಂಗನೇಸರ ಸಾಂಸ್ಕೃತಿಕ ಕಲಾ ತಂಡ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ-2022ರ ಕಾರ್ಯಕ್ರಮವನ್ನು ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಚಟವಟಿಗಳಿಗೆ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳು ಕಾರಣವಾಗಿವೆ. ಹಾಗಾಗಿ ಆ ಪ್ರಸಂಗಗಳು ಪ್ರೇಕ್ಷಕರ ಮನಸ್ಸಿಗೆ ಮುದ ನೀಡುವುದಲ್ಲದೆ ಆ ಪ್ರಸಂಗಗಳಲ್ಲಿ ಅಡಗಿರುವ ಸಂದೇಶಗಳನ್ನು ನೀಡುತ್ತವೆ. ಈ ಸಂದೇಶಗಳಲ್ಲಿ ಸಮಾಜದ ಹಿತ ಒಳಗೊಂಡಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರಳಾದೇವಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ.ಟಿ.ದುರುಗಪ್ಪ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಮೊಬೈಲ್ ಮತ್ತು ಟಿ.ವಿ.ಗಳು ಬಂದಿರುವುದರಿಂದ ಜನತೆ ಅವುಗಳಿಗೆ ಮಾರುಹೋಗಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಇದರ ಛಾಯೆ ಆವರಿಸಿದೆ. ಆದ್ದರಿಂದ ಮಾನಸಿಕ ಒತ್ತಡಗಳನ್ನು ಕಡಿಮೆಮಾಡಿಕೊಂಡು ಆರೋಗ್ಯದಿಂದ ಇರಬೇಕಾದರೆ ಪ್ರತಿಯೊಬ್ಬರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಂಗನೇಸರ ಸಾಂಸ್ಕೃತಿಕ ಕಲಾ ತಂಡದ ಅಧ್ಯಕ್ಷರಾದ ಡಾ.ಕೆ.ಬಸಪ್ಪ ಅವರು ಮಾತನಾಡಿ, ತಮ್ಮ ಸಾಂಸ್ಕೃತಿಕ ಕಲಾ ತಂಡವು ಸಂಡೂರು ತಾಲ್ಲೂಕಿನ ಅತ್ಯಂತ ಹಿಂದುಳಿದ ಗ್ರಾಮವಾದ ಎಂ.ಬಸಾಪುರದಲ್ಲಿದ್ದು, ಇದು ಗ್ರಾಮೀಣ ಭಾಗದಲ್ಲಿ ದೇಶೀಯ ಕಲೆಯನ್ನು ಕಲಿಸುವ ಕೆಲಸ ಮಾಡುತ್ತಿದೆ. ಯುವಕರಲ್ಲಿ ಮತ್ತು ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ, ರಂಗನಿರ್ದೇಶಕ ಮಂಜು ಸಿರಿಗೇರಿ, ಸಂಜೀವರಾಯನಕೊಟೆಯ ಕೆ.ನಾಗರಾಜ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧಕರಾದ ದಳವಾಯಿ ಶಂಕರಗಿರಿ ಅವರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಜಾಯಿಗನೂರಿನ ಪುರುಷೋತ್ತಮ ಡಿ. ಮತ್ತು ತಂಡದವರು ಸುಗಮ ಸಂಗೀತ ಗಾಯನ ಮಾಡಿದರು. ಸೋಮಸಮುದ್ರದ ದೊಡ್ಡಬಸಪ್ಪ ಮತ್ತು ತಂಡದವರು ವಾಲಿ ಎಂಬ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸಿದರು.
ಆರಂಭದಲ್ಲಿ ಪುರುಷೋತ್ತಮ ಚಿಕ್ಕಜಾಯಿಗನೂರು ಇವರು ಪ್ರಾರ್ಥಿಸಿದರು. ತಿರುಮಲ ಡಿ.ಜಿ. ಅವರು ಸ್ವಾಗತಿಸಿದರು. ಕೊನೆಯಲ್ಲಿ ಹುಲಿಯಪ್ಪ ಡಿ.ದಮ್ಮೂರ್ ಇವರು ವಂದಿಸಿದರು. ಕಾರ್ಯಕ್ರಮವನ್ನು ನಾಗರಾಜ್ ಸಂಜೀವರಾಯನಕೋಟೆ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಚಂದ್ರು ಬಸಾಪುರ, ಉಪನ್ಯಾಸಕರಾದ ಡಿ.ಸಿದ್ದೇಶ್, ಡಾ.ಬಿ.ಇ.ನಾಗಪ್ಪ ಮತ್ತು ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸೇರಿದಂತೆ ಅನೇಕ ಪ್ರೇಕ್ಷಕರು ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹಿಸಿದರು.