ಸಂಗೀತ ದೇವರಿಗೂ ಪ್ರೀಯವಾದುದು-ತುರಮರಿ


ಧಾರವಾಡ ಎ.23-: ಸಂಗೀತೋತ್ಸವಗಳು ಜರುಗುವುದರಿಂದ ಮನಸ್ಸು ಎಂಥಾ ಕಲ್ಮಶವಿದ್ದರೂ ಸ್ವಚ್ಛವಾಗುತ್ತದೆ. ನಾನು ಸಣ್ಣವನಿದ್ದಾಗಿನಿಂದಲೂ ಆಟದಲ್ಲಿ, ಪಾಠದಲ್ಲಿ ಬೇಸರವೆನಿಸಿದಾಗ ಸಂಗೀತವನ್ನು ಕೇಳುತ್ತಾ ಬಂದವನು ನಮಗೆ ಮುರುಘಾಮಠದಿಂದ ಸಂಗೀತದ ಗೀಳು ಹತ್ತಿಕೊಂಡಿತು. ಸಂಗೀತಕ್ಕೆ ಎಂಥ ಶಕ್ತಿ ಇದೆ ಎಂದರೆ ಎಂಥಹ ಕಟುಕ ಮನುಷ್ಯನು ಸಹ ತಲೆಯನ್ನು ಅಲುಗಾಡಿಸುತ್ತಾನೆ. ದೇವರಿಗೆ ಪ್ರಿಯವಾದದ್ದು ಸಂಗೀತ ನೃತ್ಯಗಳು ಮಾತ್ರ. ನಾವು ಪುರಾಣದಲ್ಲಿ ಓದಿದ್ದೇವೆ, ಕೇಳಿದ್ದೇವೆ ಸಂಗೀತವನ್ನು ಹಾಡಿ ಮಳೆ ಬರಿಸಿದ್ದು ಉದಾಹರಣೆಗಳಿವೆ. ಸಂಗೀತವು ದೇವರಿಗೆ ಪ್ರಿಯವಾದದ್ದು. ಆದ್ದರಿಂದ ಎಲ್ಲ ಸಂಗೀತಗಾರರು ದೇವರಿಗೂ ಬೇಕಾದವರು ಎಂದರ್ಥ. ಎಲ್ಲ ಸಂಗೀತಗಾರರು ಕನ್ನಡ ನಾಡಿನ ಭಾರತೀಯ ಸಂಸ್ಕøತಿಯನ್ನು ಬಿಂಬಿಸುವ ಪ್ರತಿನಿಧಿಗಳು ಎಂದು ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಹರ್ಷ ತುರಮರಿ ಹೇಳಿದರು.
ಕರ್ನಾಟಕ ಸಾಹಿತ್ಯ ಸಾಂಸ್ಕøತಿಕ ಕಲಾ ಸಂಘ, ಧಾರವಾಡ ಇವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಶಾಖಾ ಮೂರುಸಾವಿರ ಮಠ ಮದಿಹಾಳ ರಸ್ತೆ ಧಾರವಾಡ ಇಲ್ಲಿ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಯಾ ದಾನಮ್ಮನವರ ಇವರು, ನಾನು ಸಣ್ಣವಳಿದ್ದಾಗಲೇ ಸಂಗೀತ ಕ್ಷೇತ್ರಕ್ಕೆ ಬಂದವಳು. ಸಂಗೀತ ನನ್ನ ಕನಸು. ಅದಕ್ಕಾಗಿ ನಾನು ಗುರುಗಳನ್ನು ಹುಡುಕಿಕೊಂಡ ಧಾರವಾಡಕ್ಕೆ ಬಂದೆ. ಜಯದೇವಿ ಜಂಗಮಶೆಟ್ಟಿಯವರು ನನಗೆ ಅತಿ ಪ್ರೀತಿಯಿಂದ ಸಂಗೀತವನ್ನು ಹೇಳಿಕೊಟ್ಟರು. ಆ ಕಾರಣದಿಂದಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇನೆ. ಸಂಗೀತದಲ್ಲಿ ಸಾಧನೆ ಮಾಡಲು ಒಳ್ಳೆಯ ಗುರುಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಕಾಶ ಮಲ್ಲಿಗವಾಡ ಅವರು ನನಗೆ ಇಲ್ಲಿ ಅಧ್ಯಕ್ಷಸ್ಥಾನ ನೀಡಿದ್ದಕ್ಕಾಗಿ ಬಹಳ ಸಂತೋಷವೆನಿಸಿದೆ. ಸಂಗೀತ ಅನ್ನುವುದೊಂದು ದೊಡ್ಡ ಸಾಧನೆ. ನಾವು ಸಂಗೀತದಲ್ಲಿ ಎಷ್ಟು ಆಳ ಹೋದರೂ ಮುಗಿಯುವುದೇ ಇಲ್ಲ. ನಾವು ಒಂದು ಹಂತದಲ್ಲಿ ಗಾಯಕರಾಗಬೇಕೆಂದರೆ ಸುಮಾರು 8 ರಿಂದ 10 ವರ್ಷ ಸತತ ಅಭ್ಯಾಸ ಮಾಡಬೇಕು. ಆಗ ಸಂಗೀತದಲ್ಲಿ ಪರಿಣತಿ ಪಡೆಯಲು ಸಾಧ್ಯ. ಇಲ್ಲಿ ಬಂದಂತಹ ಗಾಯಕರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಎಂದು ಹೇಳಿದರು.
ವಸಂತಲಕ್ಷ್ಮಿ ಎಸ್. ಹೊನ್ನಿಗನೂರ ಇವರು ಸುಗಮ ಸಂಗೀತ ಕಾರ್ಯಕ್ರಮ ನೀಡಿದರು. ಕುಮಾರಿ ಶ್ರೀನಿಧಿ ಚಿಮ್ಮಲಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅನು ಮುತಗಿ ಜಾನಪದ ಗೀತೆಗಳನ್ನು ಹಾಡಿದರು. ತಬಲಾ ಸಾಥ್ ಸುರೇಶ ನಿಡಗುಂದಿ, ಹಾರ್ನೋನಿಯಂ ಸಾಥ್ ಪಾಟೀಲ ಅವರು ನೀಡಿದರು.
ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಸಾಂಸ್ಕøತಿಕ ಕಲಾ ಸಂಘದ ಉಪಾಧ್ಯಕ್ಷರಾದ ಸತೀಶ ನಿರೂಪಿಸಿ, ನಡೆಸಿಕೊಟ್ಟರು.