ಸಂಗೀತ ಕ್ಷೇತ್ರದ ಸಾಧನೆಗೆ ಹೇರೂರ ಭಾಜನ

ಅಫಜಲಪುರ:ಜೂ.25: ಕಲಬುರಗಿಯ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆಯ ಅಡಿಯಲ್ಲಿ ಗದುಗಿನ ಪಂ. ಪಂಚಾಕ್ಷರಿ ಗವಾಯಿಗಳವರ 79 ನೇ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಸಂಗೀತ ಸಮಾರಾಧನೆ ಸಮಾರಂಭದಲ್ಲಿ ಸಂಗೀತ ಶಿಕ್ಷಕ ವಿಶ್ವನಾಥ ಹೇರೂರ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ಚೇತನ ಪ್ರಶಸ್ತಿಯನ್ನು ಕಲಬುರಗಿ ನಗರದ ಕನ್ನಡ ಭವನದಲ್ಲಿ ಪ್ರದಾನ ಮಾಡಲಾಯಿತು.

ಪ್ರಸ್ತುತ ಹೇರೂರ ಅವರು ಅಫಜಲಪುರ ಪಟ್ಟಣದ ಸರ್ಕಾರಿ ಮಾದರಿಯ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಅಲ್ಲದೆ ಸಂಗೀತ, ಸಾಹಿತ್ಯ, ನಾಟಕ, ಪುರಾಣ, ಪ್ರವಚನ ಮುಂತಾದ ಕಲೆಗಳಲ್ಲಿ ತೊಡಗಿಸಿಕೊಂಡು ಅನೇಕ ಧಾರ್ಮಿಕ ಸಭೆ ಸಮಾರಂಭಗಳ ನಿರೂಪಕರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ತಾಲೂಕಿನ ಪೂಜ್ಯರು ಹಾಗೂ ಹೇರೂರ ಅವರ ಹಿತೈಷಿಗಳು ಮತ್ತು ಶಿಕ್ಷಕ ಸಿಬ್ಬಂದ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.