ಸಂಗೀತ ಎಲ್ಲರನ್ನು ಒಗ್ಗೂಡಿಸುತ್ತದೆ

ಕಲಬುರಗಿ:ಜೂ.26:ಸಂಗೀತ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದು ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು. ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಗೀತ ದಿನಾಚರಣೆಯನ್ನು ಕೊಳಲು ಊದುವ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು ವಿಶೇಷವಾಗಿ ಗ್ರಾಮೀಣ ಭಾಗದ ಜನಪದ ಕಲೆಗಳಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿಯ ಜೊತೆಗೆ ಉತ್ತಮ ಆರೋಗ್ಯ ದೊರೆಯಲಿದೆ. ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆಸಬೇಕು. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದು, ಶಾಂತಿ, ಸಮಾಧಾನ, ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವುದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆಯೆಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು, ಸಂಗೀತದ ಮಹತ್ವ ತೋರಿಸುತ್ತದೆ. ಅನುದಿನದ ಬದುಕಿನ ಜಂಜಾಟದಲ್ಲಿ ಮಾನವನಿಗೆ ಒಂದಷ್ಟು ಉಲ್ಲಾಸ, ಉತ್ಸಾಹ, ಸಮಾಧಾನ, ಶಾಂತಿ ಬೇಕಾಗುತ್ತದೆ. ಅಂತಹ ಶಾಂತಿ, ಉಲ್ಲಾಸ, ಉತ್ಸಾಹವನ್ನು ನೀಡುವ ಶಕ್ತಿ, ಕಲೆ, ಸಾಹಿತ್ಯ, ಸಂಗೀತಕ್ಕಿದೆ. ಸಂಗೀತ ಇಲ್ಲದೇ ಇರುವ ಯಾವ ಜಾಗವೂ ಇಲ್ಲ. ಮಗುವಿನ ತೊದಲು ಮಾತುಗಳಿಂದ ಹಿಡಿದು ಹರಿಯುವ ನದಿ, ತೊರೆಗಳಲ್ಲಿಯೂ ಸಂಗೀತ ಕೇಳಬಹುದು. ಸಂಗೀತಕ್ಕೆ ಎಲ್ಲರನ್ನು ಸೆಳೆಯುವ ಶಕ್ತಿ ಇದೆ ಎಂದು ಹೇಳಿದರು. ಗಾನಕೋಗಿಲೆಗಳಾದ ಮೇಘಾ ಬಿರಾದಾರ, ಸಾವಿತ್ರಿ ಉತ್ತಮವಾಗಿ ಕೊಳಲು ನುಡಿಸಿದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಅಶ್ವಿನಿ, ತಾಯಮ್ಮ, ಶಿವಾನಿ, ರೂಪಾ, ಸುಷ್ಮಾ ಸೇರಿ ಮುಂತಾದವರು ಹಾಜರಿದ್ದರು.