ಸಂಗೀತ ಆಲಿಸುವದರಿಂದ ಮನಕ್ಕೆ ಶಾಂತಿ-ಪ್ರೋ.ಅತ್ತಿಗೇರಿ

ಧಾರವಾಡ ಮಾ.27: ಸಂಗೀತದಲ್ಲಿ ನಮ್ಮ ಭಾವನೆಗಳನ್ನು ಅರಳಿಸಿ, ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಮೂಡಿಸುವ ಅದಮ್ಯ ಶಕ್ತಿ ಇದೆ ಎಂದು ಸಂಶಿಯ ಕೆ.ಎಲ್.ಇ. ಪ.ಪೂ. ಮಹಾವಿದ್ಯಾಲಯದ ಉಪನ್ಯಾಸಕರಾದ ರಮೇಶ ಅತ್ತಿಗೇರಿ ಹೇಳಿದರು.
ಅವರು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು, ಸಂಘದಲ್ಲಿ ಆಯೋಜಿಸಿದ್ದ ಪಾಂಡುರಂಗರಾವ ಆಜೂರ ಅವರ ಸುಗಮ ಸಂಗೀತ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿ, ಸಂಗೀತದಲ್ಲಿ ಸರ್ವರೋಗ ನಿವಾರಿಸುವ, ಮನಸ್ಸಿನ ಚಂಚಲತೆಯನ್ನು ತಡೆದು, ದುಖಃವನ್ನು ನಿವಾರಿಸುವ ಗುಣವಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಸಂಗೀತ ಆಲಿಸುವುದರಿಂದ ಮನಕ್ಕೆ ಶಾಂತಿ ಲಭಿಸಿ, ಜೀವನೋಲ್ಲಾಸ ಉಂಟುಮಾಡುವ ಧನ್ಯತೆ ಇದೆ ಎಂದರು.
ಅನೇಕ ರಾಜಮಹಾರಾಜರು ಸಹ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದವರಾಗಿದ್ದರು. ಸಂಗೀತದ ಮೂಲಕವೆ ಅನೇಕ ದಾಸಶ್ರೇಷ್ಠರು ತಮ್ಮ ಸುಳಾದಿಗಳಿಂದ ಜನಮಾನಸದಲ್ಲಿ ಶಾಸ್ವತವಾಗಿ ಉಳಿದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆಗೈz ಅನೇಕ ದಿಗ್ಗಜರೂ ಸಹ ಈ ನಮ್ಮ ಕನ್ನಡ ನಾಡಿನವರೆ ಆಗಿದ್ದರು ಎಂಬುದು ಹೆಮ್ಮೆ ಹಾಗೂ ಅಭಿಮಾನ ಪಡುವ ಸಂಗತಿ. ಸಾವಿರಾರು ವರ್ಷಗಳ ಸಂಗೀತ ಪರಂಪರೆಯನ್ನು ನಮ್ಮ ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘವು 131 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ನಾಡಿನ ಹೆಮ್ಮೆಯ ಕನ್ನಡದ ಗುಡಿ ಹಾಗೂ ಕನ್ನಡಿಗರ ಹೃದಯವಾಗಿದೆ. ಕನ್ನಡದ ಬಗ್ಗೆ ನಿರಂತರವಾಗಿ ಅಭಿಮಾನ ಹಾಗೂ ಜಾಗೃತಿ ಮೂಡಿಸುವ ಅದರ ಕಾರ್ಯ ಶ್ಲಾಘನೀಯ. ಕನ್ನಡದ ಸೇವೆಗಾಗಿ, ಕನ್ನಡದ ಏಳ್ಗೆಗಾಗಿ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಕಂಡ ಕನಸು ನನಸಾಗಿಸಲು ನಾವೆಲ್ಲ ಬದ್ಧರಾಗಬೇಕೆಂದರು.
ಪಾಂಡುರಂಗರಾವ್ ಅಜೂರ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿ ನೆರೆದ ಸಭೀಕರ ಮನತಣಿಸಿದರು. ಇವರಿಗೆ ಡಾ. ಪರಶುರಾಮ ಕಟ್ಟಿಸಂಗಾವಿ ತಬಲಾ ಹಾಗೂ ಹೇಮಂತ ಲಮಾಣಿ ಹಾರ್ಮೋನಿಯಂ ಸಾಥ್ ನೀಡಿದರು.
ಪ್ರಾರಂಭದಲ್ಲಿ ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಮಂಟಪದ ಸಂಚಾಲಕ ಶಂಕರ ಕುಂಬಿ ನಿರೂಪಿಸಿದರು. ಎಂ. ಎಂ ಚಿಕ್ಕಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ಸದಾನಂದ ಶಿವಳ್ಳಿ, ಕಾ.ಕಾ. ಸಮಿತಿ ಸದಸ್ಯ ಸತೀಶ ತುರಮರಿ ಹಾಗೂ ವೀರಣ್ಣ ಒಡ್ಡಿನ, ಶಂಕರ ಕಲಘಟಗಿ, ಎಂ. ಎಸ್. ನರೇಗಲ್ಲ, ಶ್ರೀಮತಿ ರೂಪಾ ಪಿ. ಆಜೂರ, ಶ್ರೀಮತಿ ಸುಮಾ ಕುರಿಗಾರ ಶ್ರೀಮತಿ ವಿಜಯಲಕ್ಷ್ಮಿ, ಕಲ್ಯಾಣಶೆಟ್ಟರ, ಶಿವಾನಂದ ದೇವಗಿರಿ, ವಿರುಪಾಕ್ಷ ಹೊಟಗಿ, ವ್ಹಿ. ಎಸ್. ಪತ್ರಿಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.