ಸಂಗೀತ ಆಲಿಕೆಯಿಂದ ಮರೆವು ರೋಗದಿಂದ ಮುಕ್ತ

ಮೈಸೂರು:ಏ:09: ಉತ್ತಮ ಕಥೆ ಕಾದಂಬರಿಗಳ ಪಠಣ ಮತ್ತು ಸುಶ್ರಾವ್ಯ ಸಂಗೀತವನ್ನು ಆಲಿಸುವುದರ ಮೂಲಕ ಮರೆವು ರೋಗದಿಂದ ಮುಕ್ತರಾಗಲು ಸಾಧ್ಯ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕರಾದ ಡಾ|| ಸಿ.ಪಿ. ನಂಜರಾಜು ತಿಳಿಸಿದರು.
ಅವರು ಇಂದು ಬೆಳಿಗ್ಗೆ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದ ವಿಲಾಸ ಔಷಧ ವಿಜ್ಞಾನ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಆಲ್ಜಿóಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ಮತ್ತು ಕೇಂದ್ರ ಸರ್ಕಾರದ ಬ್ಯಾಂಕು ನೋಟು ಮುದ್ರಣಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮರೆವು ರೋಗ ಮತ್ತು ಜೀವನ ನಿರ್ವಹಣೆ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ಒತ್ತಡ, ಪರಿಸರ ನಾಶ, ಆರ್ಥಿಕ ಮುಗ್ಗಟ್ಟು, ಹಸಿವು ಹಾಗೂ ಇನ್ನಿತರ ಹಲವಾರು ಕಾರಣಗಳಿಂದಾಗಿ ಮನುಷ್ಯನ ಮೆದುಳಿನ ಮೇಲೆ ತೀವ್ರ ತರಹದ ಪರಿಣಾಮಗಳನ್ನು ಬೀರುವುದರಿಂದ ಅಂತಹವರಲ್ಲಿ ಮರೆವು ಕಂಡು ಬರುತ್ತದೆ ಎಂದರು.
ಇಂತಹ ಮರೆವು ರೋಗದಿಂದ ಅನೇಕ ವೇಳೆ ದುರ್ಘಟನೆಗಳು ಸಂಭವಿಸಿರುವ ಎಷ್ಟೋ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ. ಈ ರೋಗವು ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ. ಹಾಗಾಗಿ ಇದನ್ನು ಮನಗೊಳಿ ಸಬಹುದಾಗಿದೆ. ಇದಕ್ಕಾಗಿ ಮರೆವಿನಿಂದ ಬಳಲುತ್ತಿರುವವರು ಪ್ರತಿದಿನ ಉತ್ತಮ ಕಥೆ, ಕಾದಂಬರಿಗಳ ಪಠಣ, ಸುಶ್ರಾವ್ಯ ಸಂಗೀತದ ಆಲಿಕೆ, ತಮಗೆ ಇಚ್ಛೆಯಿರುವ ಒಳಾಂಗಣ ಕ್ರೀಡೆಗಳಾದ ಕೇರಂ, ಚದುರಂಗ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮರೆವು ರೋಗದಿಂದ ಗುಣಮುಕ್ತರಾಗಬಹುದು ಎಂದು ನಂಜರಾಜು ನುಡಿದರು.
ಮರೆವು ರೋಗದಿಂದ ಗುಣಮುಕ್ತರಾಗಲು ಇಂದು ಲೋಕಾರ್ಪಣೆಗೊಂಡಿರುವ ಮರೆವು ರೋಗ ಮತ್ತು ಜೀವನ ನಿರ್ವಹಣೆ ಪುಸ್ತಕವು ಒಂದು ದಾರಿದೀಪದಂತಿದೆ.
ಇದನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದ ನಂಜರಾಜು ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿರುವ ಶಾರದ ವಿಲಾಸ ಔಷಧ ವಿಜ್ಞಾನ ಮಹಾಲಯ ಮತ್ತು ಬ್ಯಾಂಕು ನೋಟು ಮುದ್ರಣಾಲಯದ ಅಧಿಕಾರಿಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಬಿಎಸ್‍ಪಿಎಂನ ಜನರಲ್ ಮ್ಯಾನೇಜರ್ ಅನಂತ ಹೆಗ್ಗಡೆ ಮತ್ತು ಇನ್ನೋರ್ವ ಜನರಲ್ ಮ್ಯಾನೇಜರ್ (ಏಫ್ ಅಂಡ್ ಎ) ಧರಣ್‍ಕುಮಾರ್.ಕೆ. ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದ ವಿಲಾಸ ಔಷಧ ವಿಜ್ಞಾನ ಮಹಾಲಯದ ಪ್ರಾಂಶುಪಾಲ ಡಾ|| ಹನುಮಂತಾಚಾರ್ ಜೋಷಿ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಎಸ್‍ಪಿಎಂನ ವ್ಯವಸ್ಥಾಪಕ ನಿರ್ದೇಶಕ, ಕೆ.ಬಿ. ವಿಶ್ವನಾಥನ್, ಶಾರದ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ಅಧ್ಯಕ್ಷ ಡಾ|| ಬಿ.ಎಂ.ಸುಬ್ರಾಯ, ಉಪಾಧ್ಯಕ್ಷ ಮತ್ತು ಪುಸ್ತಕ ರಚನಾಕಾರರಾದ ಜಿ.ಎಸ್. ಗಣೇಶ್ ಇತರರಿದ್ದರು.