ಸಂಗೀತದಿಂದ ಚತುರ್ವಿಧ ಫಲ ಪ್ರಾಪ್ತಿ

ಹಿರಿಯೂರು: ನ. 12- ಸಂಗೀತ ಹಾಡುವುದರಿಂದ ಮತ್ತು ಕೇಳುವುದರಿಂದ ಚತುರ್ವಿಧ ಫಲ ಪ್ರಾಪ್ತಿಯಾಗುತ್ತದೆ, ದೈಹಿಕ ಆರೋಗ್ಯ ಮತ್ತು ಮಾನಸಿಕವಾಗಿ ಚಿಂತನಾಶೀಲತೆ ಶಾಂತತೆ ಏಕಾಗ್ರತೆ ಮೂಡಿ ಬರುತ್ತದೆ ಇದರಿಂದ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಸಂಗೀತ ವಿದ್ವಾನ್ ಆರ್ ತಿಪ್ಪೇಸ್ವಾಮಿ ಹೇಳಿದರು. ಇಲ್ಲಿನ ಕೆಎಂ ಕೊಟ್ಟಿಗೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾ ಸಂಘ ಇವರ ಸಹಯೋಗದಲ್ಲಿ 2022 – 23ನೇ ಸಾಲಿನ ವಿಶೇಷ ಘಟಕ ಯೋಜನೆಯ  ಗುರು ಶಿಷ್ಯ ಪರಂಪರೆ ಯೋಜನೆ ಯಡಿ ಆಯೋಜಿಸಿದ್ದ ಕರ್ನಾಟಕ ಸಂಗೀತ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಗೀತದ ಮೂಲಕ ಧ್ಯಾನ ಯಜ್ಞ ಜಪ ಮೈಗೂಡಿಸಿಕೊಳ್ಳುವ ಬಗ್ಗೆ ತಿಳಿಸಿದರು. ಮುಖ್ಯ ಶಿಕ್ಷಕ ಪಾಂಡುರಂಗಪ್ಪನವರು ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಸಂಗೀತದ ಅವಶ್ಯಕತೆ ಇದೆ ಇದಕ್ಕೆ ಮಕ್ಕಳಿಗೆ ಸಂಗೀತ ಹೇಳಿಕೊಡುವ ಸಂಗೀತ ಶಿಕ್ಷಕರ ಸೇವೆ ಅಮೂಲ್ಯವಾದದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ಮಂಜಮ್ಮ, ಜ್ಯೋತಿ ಸ್ವರೂಪಿಣೆ ಮಹಿಳಾ ಲಲಿತ ಕಲಾ ಸಂಘದ ಜಗದಾಂಬ ಗಾಯಕಿ ಲಕ್ಷ್ಮಿ ಸಂಗೀತ ಶಿಕ್ಷಕ ನವೀನ್ ಕುಮಾರ್ ಹಾಗೂ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಂಗೀತ  ಹಾಗೂ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು.