ಸಂಗೀತಕ್ಕೂ ಆರೋಗ್ಯಕ್ಕೂ ನಂಟು  : ಸ್ವರೂಪಾನಂದ  ಕೊಟ್ಟೂರು


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ. 6 :- ಸಂಗೀತಕ್ಕೂ ನಮ್ಮ ಆರೋಗ್ಯಕ್ಕೂ ಅವಿನಾಭಾವ  ಸಂಬಂಧವಿದೆ. ಸಂಗೀತವು ನಮ್ಮಲ್ಲಿ ಏಕಾಗ್ರತೆ, ಮನಸ್ಸಿಗೆ ನೆಮ್ಮದಿ, ಆನಂದ ಮುದ ನೀಡುವುದರ ಜೊತೆಗೆ ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಸಂಗೀತಕ್ಕಿದೆ ಎಂದು ಹವ್ಯಾಸಿ ಬರಹಗಾರ ಹಾಗೂ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಸ್ವರೂಪಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗುರುವಾರ ತಾಲ್ಲೂಕಿನ ಕುಪ್ಪಿನಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಜಿಲ್ಲೆಯ ಪ್ರಾಯೋಜಕತ್ವದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಕೂಡ್ಲಿಗಿ ಇವರ ಆಶ್ರಯದಲ್ಲಿ ಕುಪ್ಪಿನಕೇರಿ ಕೆ.ಶಂಕರ್ ಮತ್ತು ತಂಡದವರಿಂದ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ  ಸಂಗೀತವನ್ನು ಆಲಿಸುವುದರ ಜೊತೆಗೆ ಎಲ್ಲರೂ ಸಂಗೀತಾಭ್ಯಾಸ ಮಾಡಿ,  ನೀವು ಸಂಗೀತ ಪ್ರಿಯರಾದರೆ  ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಹಾಗೆಯೇ  ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಸಂಗೀತಕ್ಕೆ ದೇಶ, ಗಡಿಯನ್ನು ಮೀರಿ ಎಲ್ಲರನ್ನೂ, ಎಲ್ಲವನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಇದೆ. ಸಂಗೀತಕ್ಕೆ ಮನಸೋಲದವರಿಲ್ಲ. ಸಂಗೀತ ಸಿದ್ಧಿಯಿಂದ ನೀವು ಆರೋಗ್ಯದ ಲಾಭಗಳ ಪಡೆದುಕೊಳ್ಳಿ ಇದರಿಂದ ನಿಮ್ಮ ಜೀವನದಲ್ಲಿ ಅನೇಕ ಗುಣಾತ್ಮಕ ಬದಲಾವಣೆಗಳಾಗುತ್ತವೆ ಎಂದರು.
ವಿಶ್ವಕರ್ಮ ಸಮಾಜದ ಸಂಘಟನೆ ಮುಖಂಡ ಬಡಿಗೇರ್ ನಾಗರಾಜ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಗೆ ನಾವೆಲ್ಲ ಮಾರು ಹೋಗಿ ನಮ್ಮ ನೆಲದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರೆಯುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ಜಾನಪದ ಕಲೆಗಳತ್ತ ಒಲವು ಬೆಳೆಸಿಕೊಳ್ಳಿ ಎಂದರು. ಪ್ರತಿಯೊಬ್ಬರಲ್ಲಿಯೂ ಒಬ್ಬ ಕಲಾವಿದನಿದ್ದಾನೆ. ಅದನ್ನು ನೀವು ಹೊರಗೆ ತರಬೇಕು. ಅದು ಸಂಗೀತ, ನೃತ್ಯ, ಹಾಡು, ಚಿತ್ರಕಲೆ.. ಹೀಗೆ ಯಾವುದೇ ರೂಪದಲ್ಲಿ ಆಗಿರಬಹುದು. ಪಠ್ಯದ ಜೊತೆಗೆ ಇಂತಹ ಅಭಿರುಚಿಗಳನ್ನು ಬೆಳೆಸಿ, ಪೋಷಿಸಿದ್ದೇ ಆದರೆ ಈ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುವಿರಿ. ಇದು ನಿಮಗೆ ಪ್ರಸಿದ್ಧಿ ತಂದು ಕೊಡುವುದರ ಜೊತೆಗೆ ಈ ನಾಡಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತಷ್ಟು ಶ್ರೀಮಂತಗೊಳ್ಳುತ್ತದೆ ಎಂದರು.
ಕುಪ್ಪಿನಕೆರೆ  ಶಾಲಾ ಮುಖ್ಯಗುರುಗಳಾದ ಡಿ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಇಂತಹ ಅಭಿರುಚಿಗಳನ್ನು ಬೆಳೆಸುವಲ್ಲಿ ಪೊಷಕರು ಸೇರಿದಂತೆ ಸಮಾಜದ ಪ್ರತಿಯೊಬ್ಬರು ಶ್ರಮಿಸಬೇಕು. ಆಗ ಮಾತ್ರ ನಮ್ಮ ಈ ಕಲೆಯನ್ನು ಮುಂದಿನ ಪೀಳಿಗೆ ಉಳಿಸಿಕೊಂಡು ಹೋಗಲು ಸಾಧ್ಯವೆಂದರು. ಸಂಗೀತ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಂಗೀತ ಬಗ್ಗೆ ಆಸಕ್ತಿ, ಕಲಿಯುವ ಹುಮ್ಮಸ್ಸು ಬಂದಿದೆ. ಇದಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡಲಾಗುವುದೆಂದರು.
ಕೆ.ಶಂಕರ್, ಸಾಸಲವಾಡದ ಚನ್ನವೀರಸ್ವಾಮಿ, ಶಿವಮೂರ್ತಿ ಆಚಾರ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾಯಕ್ರಮದಲ್ಲಿ ಕೂಡ್ಲಿಗಿ ವರ್ತಕ ಆನಂದಬಾಬು, ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಧರ ಮಿತ್ರ,  ಡಿ.ಎಂ ಈಶ್ವರಪ್ಪ, ವಿಶ್ವಕರ್ಮ ಸಮಾಜದ ಮುಖಂಡ ಸಿ. ನಾಗರಾಜ, ಸಂಗೀತ ಕಲಾವಿದರಾದ ವಿಭೂತಿ ವೀರಣ್ಣ, ಅಗಸನಕಟ್ಟೆ ತಿಂದಪ್ಪ, ಬಾಣದ ನರಸಿಂಹಪ್ಪ, ಏಳೂರಜ್ಜ, ಭರಮಪ್ಪ, ಮಲ್ಲಪ್ಪ, ಅಂಜಿನಪ್ಪ, ಕೋಟಹಳ್ಳಿ ನಾಗಣ್ಣ, ಕಿಶೋರ್, ಸಾಸಲವಾಡ ನಾಗರಾಜ, ಶಿಕ್ಷಕಿಯರಾದ ಸುನೀತ, ಕಾವ್ಯ ಮುಂತಾದವರಿದ್ದರು.
ಕುಪ್ಪಿನಕೆರೆ ಶಾಲಾ  ಶಿಕ್ಷಕರಾದ ರಫೀಕ್ ಅಹಮದ್, ರಮೇಶ್ ಕಾರ್ಯಕ್ರಮ ನಿರ್ವಹಿಸಿದರು.