ಸಂಗೀತಕ್ಕಿದೆ ರೋಗ ನಿವಾರಣಾ ಶಕ್ತಿ

ಕಲಬುರಗಿ:ಜೂ.22: ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದು, ಶಾಂತಿ. ಸಮಾದಾನ, ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆಯೆಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಮಹತ್ವ ತೋರಿಸುತ್ತದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.

    ನಗರದ ಜಗತ್ ಬಡಾವಣೆಯಲ್ಲಿರುವ 'ಸಪ್ತಸ್ವರ ಸಂಗೀತ ಪಾಠಶಾಲೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಸಂಜೆ ಜರುಗಿದ 'ವಿಶ್ವ ಸಂಗೀತ ದಿನಾಚರಣೆ'ಯಲ್ಲಿ ಕಲಾವಿದರಿಗೆ ಸತ್ಕಾರ, ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
     ಪ್ರಾಚೀನ ಕಾಲದಿಂದಲೂ ಸಂಗೀತವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಹಿಂದಿನ ದಿನಗಳಲ್ಲಿ ಮನೆಯಲ್ಲಿ ಹಿರಿಯರು ಮಕ್ಕಳಿಗೆ ಹಾಡಿ, ಸಂತೋಷಗೊಳಿಸುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ಇವೆಲ್ಲಾ ಮಾಯವಾಗುತ್ತಿವೆ. ನಮ್ಮ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ಸಂಗೀತ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿದರೆ, ಅವರು ಸಮಾಜಕ್ಕೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
 ಸತ್ಕಾರ ಸ್ವೀಕರಿಸಿ ಮಾತನಾಡಿದ ಸಂಗೀತ ಶಿಕ್ಷಕ ಪ್ರಕಾಶ ಕುಲಕರ್ಣಿ, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ನಗರದ ಸೇರಿ ಕೆಲವೆಡೆ ಪಾಠಶಾಲೆ ಆರಂಭಿಸಿದ್ದೇನೆ. ನನಗೆ ಹಣ ಗಳಿಕೆ ಉದ್ದೇಶವಲ್ಲ. ನಾನು ಕಲಿತ ಸಂಗೀತ ವಿದ್ಯೆ ನಾಲ್ಕು ಜನರಿಗೆ ಹಂಚಿದರೆ, ನಮ್ಮ ಭಾಗದ ಮಕ್ಕಳು ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ, ನನ್ನ ವಿದ್ಯೆ ಮತ್ತಷ್ಟು ಬೆಳೆಯುತ್ತದೆ ಎಂಬುದು ನನ್ನ ಆಶಯವಾಗಿದೆ. ಇದರಿಂದ ನನಗೆ ಆತ್ಮತೃಪ್ತಿ ದೊರೆಯುತ್ತದೆ. ಇದಕ್ಕೆ ಸಂಗೀತ ಮನಸ್ಸುಗಳ ಸಹಕಾರ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಸುನೀಲಕುಮಾರ ಎಚ್.ಬಿ.ವಂಟಿ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ನಾಗಭೂಷಣ ಅಗಸ್ಥ್ಯೀರ್ಥ, ಪೀರಪ್ಪ ಝಾಪುರ, ಮಲ್ಲಿಕಾರ್ಜುನ ಝಾಪುರ, ತಾರಾ ಅಗಸ್ಥ್ಯತೀರ್ಥ, ರುಕ್ಕಪ್ಪ ಟಿ.ಕಾಂಬಳೆ, ಪ್ರಕಾಶ ವಗ್ಗೆ, ಅಭಯ ಪ್ರಕಾಶ, ಪ್ರಶಾಂತ ನಿಲಂಕಾರ, ನೀಲಾಂಬಿಕಾ ನಿಲಂಕಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

    ಸಂಗೀತಾ ಕಲಾವಿದರಾದ ಪ್ರಕಾಶ ಕುಲಕರ್ಣಿ, ಎಸ್.ಬಿ.ಹರಿಕೃಷ್ಣ, ಲಲಿತಾ ಹರಿಕೃಷ್ಣ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಕಲಾವಿದರು, ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗಿತು.