ಸಂಗಮೇಶ್ವರ ಗ್ರಾಮದ ಹಳ್ಳಕ್ಕೆ ಸಂಸದರಾದ ವೈ.ದೇವೇಂದ್ರಪ್ಪ ಭೇಟಿ


ಸಂಜೆವಾಣಿ ವಾರ್ತೆ
ಕೊಟ್ಟೂರು, ನ.10: ಮಳೆ ಬಂದರೆ ಸಂಗಮೇಶ್ವರ ಗ್ರಾಮದಿಂದ ಹಗರಿ ಗಜಾಪುರ,ಮೈದೂರು, ಬಳಿಗನೂರು, ಇನ್ನು ಮುಂತಾದ ಗ್ರಾಮಗಳಿಗೆ ತೆರಳುವ ದಾರಿಯ ಮದ್ಯೆದಲ್ಲಿ ಹಳ್ಳ ಹರಿಯುತ್ತಿದ್ದರಿಂದ ಸಂಗಮೇಶ್ವರ ಗ್ರಾಮದಿಂದ ತೆರಳಲು, ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಗರಿಗಜಾಪುರ ಗ್ರಾಮಕ್ಕೆ ತೆರಳಲು ಹಳ್ಳ ಹರಿಯುವುದರಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಇದರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಬ್ರಿಡ್ಜ್ ಕಾಮ್ ಬ್ಯಾರೇಜ್ ನಿರ್ಮಾಣಕ್ಕೆ ಶಿಫಾರಸು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಸದರಾದ ವೈ.ದೇವೇಂದ್ರಪ್ಪ ಮತ್ತು ಎ ಡಬ್ಲ್ಯೂ ಡಿ ರಾಘವೇಂದ್ರ ಅವರು ಸ್ಥಳವನ್ನು ಪರಿಶೀಲನೆ ಮಾಡಿದರು.
  ನಂತರ ಮಾತನಾಡಿದ ಅವರು ಬ್ರಿಡ್ಜ್ ಕಾಮ್ ಬ್ಯಾರೇಜ್ ನಿರ್ಮಿಸುವುದರಿಂದ ಇಲ್ಲಿನ ರೈತರ  ಬೋರ್ ವೆಲ್ ಗಳ ನೀರಿನ ಮಟ್ಟ ಹೆಚ್ಚಾಗುತ್ತದೆ, ಜನರು ಬೇರೆ ಬೇರೆ ಗ್ರಾಮಗಳಿಗೆ ತೆರಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನಂತರ ಕೊಟ್ಟೂರು ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದರು. ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಳೆಗಾಲದ ಸಮಯದಲ್ಲಿ ಮಳೆ ಬಂದರೆ ಅಗ್ನಿಶಾಮಕ ಠಾಣೆ ಆವರಣವು ಕೆಸರಿನಿಂದ ಕೂಡಿರುತ್ತದೆ ಅಗ್ನಿಶಾಮಕ ವಾಹನಗಳು ಚಲಿಸುವಾಗ ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ ಅದಕ್ಕಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಮನವಿಯನ್ನು ಸಲ್ಲಿಸಿದರು. ನಂತರ ಸಂಸದರಾದ ದೇವೇಂದ್ರಪ್ಪ ದೂರವಾಣಿ ಮೂಲಕ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಾದ ನಸರುಲ್ಲಾ ಅವರಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಎಚ್ಚರಿಕೆಯನ್ನು ನೀಡಿದರು.
ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರಾದ  ಎಸ್. ಭೀಮನಾಯ್ಕ್  ರಾಜ್ಯ ಸರ್ಕಾರದಿಂದ ಕಳಪೆ ಮೋಟರ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದರಲ್ಲ ಆ ಮೋಟರಗಳನ್ನು ಫಲಾನುಭವಿಗಳಿಗೆ ಏಕೆ ವಿತರಣೆ ಮಾಡಬೇಕು? ಅವರ ಕೈಯಲ್ಲಿ ಅಧಿಕಾರ ಇದೆಯಲ್ಲ! ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಪರಿಶೀಲನೆ ಮಾಡಬಹುದಲ್ಲ ಎಂದು ತಿಳಿಸಿದರು. ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠಕ್ಕೆ ಬೆಳ್ಳಿ ಬಾಗಿಲು ನಿರ್ಮಿಸುವ ಯೋಜನೆ ತಡವಾಗಿದ್ದಕ್ಕೆ ಸಂಬಂಧಿಸಿದ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಎಂ ಪ್ರಕಾಶ್ ರಾವ್ ಅವರ ದೂರವಾಣಿ ಮೂಲಕ  ತರಾಟೆಗೆ ತೆಗೆದುಕೊಂಡು ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ತಿಂದಪ್ಪ, ಕೊಟ್ಟೂರು ಘಟಕದ ಬಿಜೆಪಿ ಅಧ್ಯಕ್ಷರಾದ ಬಿ ಆರ್ ವಿಕ್ರಂ, ರಾಘವೇಂದ್ರ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.