ಸಂಗಮೇಶ್ವರ ಆಸ್ಪತ್ರೆಯ ವೈದ್ಯರ ಸಾಧನೆ

ಏಳರಲ್ಲಿ ಜನಿಸಿದ ಅತೀ ಕಡಿಮೆ ತೂಕದ ಅವಳಿ ಮಕ್ಕಳ ಜೀವ ರಕ್ಷಣೆ
ಕಲಬುರಗಿ,ನ.17-ಏಳನೇ ತಿಂಗಳಲ್ಲಿ ಜನಿಸಿದ ಅತೀ ಕಡಿಮೆ ತೂಕದ ಅವಳಿ ಮಕ್ಕಳಿಗೆ ಸುಮಾರು 1 ತಿಂಗಳು 6 ದಿನಗಳವರೆಗೆ ಚಿಕಿತ್ಸೆ ನೀಡಿ ಎರಡೂ ಮಕ್ಕಳ ಜೀವ ಉಳಿಸುವುದರ ಮೂಲಕ ಇಲ್ಲಿನ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ ಆಸ್ಪತ್ರೆಯ ವೈದ್ಯರು ಮಾನವೀಯತೆ ಮೆರೆದಿದ್ದಾರೆ.
ಶ್ರೀಮತಿ ಶೀತಲ ಗಂಡ ರಾಘವೇಂದ್ರ ಅವರಿಗೆ 16.7.2021 ರಂದು ಅವಳಿ (ಒಂದು ಹೆಣ್ಣು ಹಾಗೂ ಒಂದು ಗಂಡು) ಮಗು ಜನಿಸಿದ್ದವು. ಒಂಬತ್ತು ತಿಂಗಳಲ್ಲಿ ಜನಿಸಬೇಕಾಗಿದ್ದ ಮಕ್ಕಳು ಏಳನೇ ತಿಂಗಳಲ್ಲಿ ಜನಿಸಿದ್ದರಿಂದ ಅತೀ ಕಡಿಮೆ ತೂಕ ಹೊಂದಿದ್ದವು. ಆಗ ಈ ಅವಳಿ ಮಕ್ಕಳನ್ನು ಸಂಗಮೇಶ್ವರ ಆಸ್ಪತ್ರೆಗೆ ತಂದು ದಾಖಲು ಮಾಡಲಾಯಿತು. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಾಗ ಹೆಣ್ಣು ಮಗುವಿನ ತೂಕ ಕೇವಲ 900 ಗ್ರಾಂ. ಹಾಗೂ ಗಂಡು ಮಗುವಿನ ತೂಕ 1000 ಗ್ರಾಂ. ಆಗಿತ್ತು. ಆಗ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ರೂಪಾ ಬಿ.ಮಂಗಶೆಟ್ಟಿ, ಡಾ.ಮಲ್ಲಿಕಾರ್ಜುನ ಕೋಬಾಳ, ಡಾ.ಅಪೂರ್ವ, ಡಾ.ಶಿವಕುಮಾರ ಸಂಗೋಳ್ಗಿ ಹಾಗೂ ಸ್ನಾತಕೋತ್ತರ ಪದವೀಧರರಾದ ಡಾ.ಆದರ್ಶ ಅವಂತಿ, ಡಾ.ರತ್ನಾ ಮತ್ತು ಡಾ.ಪಾರ್ವತಿ ಅವರು ಮಕ್ಕಳ ಆರೋಗ್ಯ ಪರೀಕ್ಷಿಸಿ ಚಿಕಿತ್ಸೆ ನೀಡಲು ಆರಂಭಿಸಿದರು. ಎರಡೂ ಮಕ್ಕಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ತಕ್ಷಣವೇ “ಸರಫೆಕಟೆಂಟ್” ಚಿಕಿತ್ಸೆ ನೀಡಿ 8 ದಿನಗಳ ಕಾಲ ವೆಂಟಿಲೇಟರ್ ಮೇಲೆ ಇಡಲಾಯಿತು. ಆಗ ಎರಡೂ ಮಕ್ಕಳಲ್ಲಿ ಚೇತರಿಕೆ ಕಾಣಿಸಿಕೊಂಡಿತು. ನಂತರ ಗಂಡು ಮಗುವಿಗೆ ನಿಮೋನಿಯಾ ರೋಗ ಕಾಣಿಸಿಕೊಂಡಿದ್ದರಿಂದ ಮತ್ತೆ ಆ ಮಗುವನ್ನು 4 ದಿನಗಳಕಾಲ ವೆಂಟಿಲೇಟರ್ ನಲ್ಲಿ ಇಡಲಾಯಿತು. ಹೀಗೆ ಸುಮಾರು 1 ತಿಂಗಳು 6 ದಿನಗಳವರೆಗೆ ಮಕ್ಕಳಿಗೆ ಚಿಕಿತ್ಸೆ ನೀಡುತ್ತ ಆರೈಕೆ ಮಾಡಲಾಯಿತು. ಎರಡೂ ಮಕ್ಕಳಿಗೆ “ರೆಟಿನೋಪಥಿ ಆಫ್ ಪ್ರಿಮೆಚ್ಯುರಿಟಿ” ಸಮಸ್ಯೆ ಇದ್ದುದ್ದರಿದಂದ ಲೇಸರ್ ಚಿಕಿತ್ಸೆ ಹಾಗೂ ಇನ್ನಿತರ ತುರ್ತು ಚಿಕಿತ್ಸೆ ಸಹ ನೀಡಲಾಯಿತು. 36 ದಿನಗಳ ನಂತರ ಎರಡೂ ಮಕ್ಕಳ ಆರೋಗ್ಯದಲ್ಲಿ ತುಂಬಾ ಸುಧಾರಣೆ ಕಂಡು ಬಂದು ಮಕ್ಕಳು ತಾಯಿ ಎದೆಹಾಲು ಕುಡಿಯಲು ಪ್ರಾರಂಭಿಸಿದಾಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮೂರು ತಿಂಗಳು ಹದಿನೈದು ದಿನಗಳ ನಂತರ ಮಕ್ಕಳನ್ನು ಆಸ್ಪತ್ರೆಗೆ ತಂದು ಪರೀಕ್ಷಿಸಿದಾಗ ಹೆಣ್ಣು ಮಗುವಿನ ತೂಕ 2.030 ಕೆ.ಜಿ. ಹಾಗೂ ಗಂಡು ಮಗುವಿನ ತೂಕ 3.200 ಕೆ.ಜಿ. ಏರಿಕೆಯಾಗಿರುವುದು ಕಂಡು ಬಂದಿದೆ. ಈಗ ಎರಡೂ ಮಕ್ಕಳು ಆರೋಗ್ಯದಿಂದಿವೆ.
ಆಸ್ಪತ್ರೆಯ ವೈದ್ಯರ ಈ ಸಾಧನೆಯನ್ನು ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷ ಎಸ್.ಆರ್.ಹರವಾಳ ಹಾಗೂ ಆಸ್ಪತ್ರೆಯ ಸಂಚಾಲಕರಾದ ಡಾ.ಶರಣಬಸಪ್ಪ ಕಾಮರೆಡ್ಡಿ, ವೈದ್ಯಕೀಯ ಅಧೀಕ್ಷಕಿ ಡಾ.ಮಹಾನಂದ ಮೇಳಕುಂದಿ ಅವರು ಶ್ಲಾಘಿಸಿದ್ದಾರೆ.