ಸಂಗನಬಸವ ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಹಲವು ಗಣ್ಯರ ಸಂತಾಪ

(ಸಂಜೆವಾಣಿ ವಾರ್ತೆ)
ಬೆಂಗಳೂರು ನ 22 :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ  ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆ, ಬಳ್ಳಾರಿಯ ಕೊಟ್ಟೂರು ಸ್ವಾಮಿಮಠ, ಶ್ರೀಠದ ಶಿವಯೋಗ ಮಂದಿರದ ಅಧ್ಯಕ್ಷರಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಸುಕಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಹಲವು ದಶಕಗಳ ಕಾಲ ಅವರು ಕನ್ನಡ ನಾಡು, ನುಡಿ, ಲಿಂಗಾಯತ ಧರ್ಮಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರ ನಿಧನದಿಂದ ಅಪಾರ ಭಕ್ತ ಸಮೂಹ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಭಕ್ತ ಸಮೂಹಕ್ಕೆ ನೀಡಲಿ ಎಂದು ಕೋರುತ್ತೇನೆ.
ಇತ್ತೀಚೆಗಷ್ಟೇ, ಕೆಲವೇ ದಿನಗಳ ಹಿಂದೆ ಹಾಲಕೆರೆ ಮಠದ ಸಮಾರಂಭದಲ್ಲಿ ಭಾಗವಹಿಸಿದ್ದೆ. ಶ್ರೀಗಳ ಆಶೀರ್ವಾದ ಪಡೆದಿದ್ದೆ. ಆದರೆ ಇಷ್ಟು ಬೇಗ ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಇರಲಿಲ್ಲ. ಅವರ ನಿಧನ ನನಗೆ ವೈಯುಕ್ತಿಕವಾಗಿ ಬಹಳ ದುಃಖ ತರಿಸಿದೆ ಎಂದು ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಸ್ವಾಮಿ, ಉಪಾಧ್ಯಕ್ಷ ಅಲ್ಕಂಚೆನ್ನಫ್ಪ, ಕಾರ್ಯದರ್ಶಿ ಬಿ.ವಿ.ಬಸವರಾಜ್, ಸಹ ಕಾರ್ಯದರ್ಶಿ, ದರೂರು ಶಾಂತನಗೌಡ, ಖಜಾಂಚಿ ಗೋನಾಳ್ ರಾಜಶೇಖರಗೌಡ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಬಸವರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಿರುಗುಪ್ಪ ಶಾಸಕ ಸೋಮಲಿಂಗಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮೊದಲಾದವರು ಶ್ರೀಗಳ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

 ಬಸ್ ವ್ಯವಸ್ಥೆ:
ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಡಾ|| ಸಂಗನಬಸವ ಮಹಾಸ್ವಾಮಿಗಳು ಇಂದು ಮುಂಜಾನೆ ಲಿಂಗೈಕ್ಯರಾಗಿದ್ದಾರೆ.  ಶ್ರೀಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ
ತೆರಳುವ ಭಕ್ತರಿಗಾಗಿ  ವೀರಶೈವ ವಿದ್ಯಾವರ್ಧಕ ಸಂಘದಿಂದ  ನಾಳೆ ಬೆಳಿಗ್ಗೆ 06 ಗಂಟೆಗೆ ನಗರದ ಸಂಘದ ಕಛೇರಿಯಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರೆಗೆ ಹಾಲಕೆರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆಂದು ಸಂಘದ ಕಾರ್ಯದರ್ಶಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.