ಸಂಖ್ಯೆ ಬಹಿರಂಗಕ್ಕೆ ಕಾಂಗ್ರೇಸ್ ಆಗ್ರಹ


ಧಾರವಾಡ, ಜೂ 6: ಜಿಲ್ಲೆಯಲ್ಲಿ ದಾನಿಗಳಿಂದ ಬಂದಂತಹ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳ ಸಂಖ್ಯೆ ಎಷ್ಟು ಎಂದು ಬಹಿರಂಗಗೊಳಿಸಬೇಕೆಂದು ಕಾಂಗ್ರೆಸ್ ವಕ್ತಾರ ರಾಬರ್ಟ್ ದದ್ದಾಪುರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಧಾರವಾಡ ಜಿಲ್ಲೆಯಲ್ಲಿ ಕೋವಿಡ್‍ನ ಈ ಸಂಕಷ್ಟ ಕಾಲದಲ್ಲಿ ಅನೇಕ ದಾನಿಗಳು ಸ್ವ-ಇಚ್ಛೆಯಿಂದ ಸೋಂಕಿತರಿಗೆ ಉಪಯೋಗವಾಗಲು ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾಡಳಿತ ಸಂಬಂಧಿತ ಇಲಾಖೆಗಳಿಗೂ ದಾನವನ್ನು ಮಾಡಿರುತ್ತಾರೆ. ಸೋಂಕಿತರನ್ನು ರಕ್ಷಿಸಲು ದಾನಿಗಳು ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ನೀಡಿರುತ್ತಾರೆ. ಕೆಲವು ಕಡೆ ದಾನವಾಗಿ ನೀಡಲ್ಪಟ್ಟ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳ ದುರುಪಯೋಗವಾಗುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ. ಕಾರಣ ಜಿಲ್ಲಾಡಳಿತವು ದಾನಿಗಳಿಂದ ಕೊಡಲ್ಪಟ್ಟ ಈ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕಾಗಿ ವಿನಂತಿ. ಈವರೆಗೆ ದಾನಿಗಳಿಂದ ಕೊಡಲ್ಪಟ್ಟ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳ ಲೆಕ್ಕವನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಆಗ್ರಹಿಸುವದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಹು-ಧಾ ಮಹಾನಗರ ಕಾಂಗ್ರೆಸ್, ಸಮಿತಿ, ಎಸ್.ಸಿ. ಘಟಕ ಅಧ್ಯಕ್ಷ ಆನಂದ ಮುಶೆಣ್ಣವರ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಜಾದವ, ಕೆಪಿಸಿಸಿ ಸದಸ್ಯ ಪ್ರಕಾಶ ಘಾಟಗೆ ಹಾಗೂ ಎಚ್.ಎಮ್. ರಾಜು ಉಪಸ್ಥಿತರಿದ್ದರು.