ಸಂಕ್ಷಿಪ್ತ ಹೋಳಿ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಮನವಿ

ಧಾರವಾಡ, ಮಾ. 25: ಕೋವಿಡ್-19 ರ 2ನೇ ಅಲೆ ಎಲ್ಲ ಕಡೆ ಆವರಿಸುತ್ತಿರುವುದರಿಂದ ಸಾರ್ವಜನಿಕವಾಗಿ ಹಬ್ಬಗಳನ್ನು ಆಚರಿಸುವಾಗ ಆರೋಗ್ಯ ಮುನ್ನೇಚ್ಚರಿಕೆ ವಹಿಸುವುದು ಮುಖ್ಯವಾಗಿದ್ದು, ಮುಂಬರುವ ಹೋಳಿ ಹಬ್ಬವನ್ನು ತಮ್ಮ ಕುಟುಂಬಗಳಿಗೆ ಸೀಮಿತಗೊಳಿಸಿ ಸಂಕ್ಷೀಪ್ತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿದರು.

ಅವರು ಮಹಾನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರುಗಿದ ಅವಳಿ ನಗರದಲ್ಲಿರುವ ಹೋಳಿ, ಹಲಗಿ ಮತ್ತು ಕಾಮಣ್ಣನ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕೋವಿಡ್ 2ನೇ ಅಲೆ ಆರಂಭವಾಗಿದ್ದು, ಪ್ರತಿಯೊಬ್ಬರೂ ಸೂಕ್ತ ಮುನ್ನೇಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿ ಮಾಹಿತಿ, ಮುನ್ನೆಚ್ಚರಿಕೆ ಮತ್ತು ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಿದ್ದಾರೆ. 

ಹೋಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಹಾನಿಕಾರಕ ಬಣ್ಣಗಳನ್ನು ಬಳಸದೇ ನೈಸರ್ಗಿಕ ಬಣ್ಣಗಳನ್ನು ಬಳಸಿ ಕುಟುಂಬ ಸದಸ್ಯರೊಂದಿಗೆ ಸಂಕ್ಷೀಪ್ತವಾಗಿ ಹೋಳಿ ಹಬ್ಬವನ್ನು ಆಚರಿಸಬೇಕೆಂದು ತಿಳಿಸಿದರು.

ಪೊಲೀಸ್ ಆಯುಕ್ತ ಲಾಬೂರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಜಾಗೃತಿ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೊವಿಡ್ ಮಾರ್ಗಸೂಚಿಗಳನ್ನು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಿ ಹೋಳಿ ಹಬ್ಬವನ್ನು ಆಚರಿಸಬೇಕು. ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಘಟನೆಗಳು ಹಲಗಿ ಹಬ್ಬ, ಹೋಳಿ ಮೆರವಣಿಗೆಗಳನ್ನು ಆಯೋಜಿಸದೇ ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿ ಮತ್ತು ಸಂಕ್ಷೀಪ್ತವಾಗಿ ಹೋಳಿ ಹಬ್ಬ ಆಚರಿಸುವಂತೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.

ಧಾರವಾಡ ಹಲಗಿ ಹಬ್ಬದ ಸಂಯೋಜಕ ಶಂಕರ ಶೇಳಕೆ ಅವರು ಮಾತನಾಡಿ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಹಲಗೆ ಹಬ್ಬ ಮೆರವಣಿಗೆ ಮಾಡುವುದಿಲ್ಲ, ಕಾಮಣ್ಣನ ಮೆರವಣಿಗೆ ಮಾಡದೇ ದಹನ ಮಾಡಲಾಗುವುದು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ನಿಯಮಗಳನ್ನು ಎಲ್ಲರೂ ಪಾಲನೆ ಮಾಡುತ್ತೇವೆ ಎಂದರು.

ಹುಬ್ಬಳ್ಳಿ ಕಮರಿಪೇಟೆಯ ಅಮರೇಶ್ ಹಿಪ್ಪರಗಿ ಅವರು ಮಾತನಾಡಿ, ನಾವು ಯಾವುದೇ ಮೆರವಣಿಗೆ ಮಾಡುವುದಿಲ್ಲ. ಸಾಂಪ್ರಾದಾಯಿಕವಾಗಿ ಕಾಮಣ್ಣನ ಹಬ್ಬವನ್ನು ಸಂಕ್ಷೀಪ್ತವಾಗಿ ಆಚರಿಸುತ್ತೇವೆ ಎಂದರು.

ಮೋತಿಲಾಲ್‍ಸಾಬ್ ಕಬಾಡೆ ಅವರು ಮಾತನಾಡಿ, ಕಮರಿಪೇಟೆಯಲ್ಲಿ ಪ್ರತಿವರ್ಷದಂತೆ ಯಾವುದೇ ರೀತಿಯ ಮೆರವಣಿಗೆ ಮಾಡದೇ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸುತ್ತೇವೆ ಎಂದರು.

ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ, ಉಪ ಪೊಲೀಸ್ ಆಯುಕ್ತರಾದ ರಾಮರಾಜನ್, ಆರ್.ಬಿ. ಬಸರಗಿ, ಎಸಿಪಿಗಳಾದ ಮಲ್ಲಿಕಾರ್ಜುನ ಮಲ್ಲಾಪೂರ, ವಿನೋದ ಮುಕ್ತೇದಾರ ಮತ್ತು ಅನುಷಾ ಜಿ., ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.