ಸಂಕ್ರಾಂತಿ ಹಬ್ಬದ ಆಚರಣೆಗೆ ಭರದ ಸಿದ್ಧತೆ

ಮೈಸೂರು,ಜ.14:- ಕೆಲವರು ಇಂದು ಮತ್ತು ಕೆಲವರು ನಾಳೆ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದು, ಮೈಸೂರಿನಲ್ಲಿಯೂ ಕೊರೋನಾತಂಕದ ನಡುವೆಯೇ ಸಂಕ್ರಾಂತಿ ಹಬ್ಬದ ಆಚರಣೆ ಪ್ರಯುಕ್ತ ವಿವಿಧ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಕಂಡು ಬಂದಿತು.
ಹಬ್ಬದ ಪ್ರಯುಕ್ತ ಜನತೆ ಅಗತ್ಯ ವಸ್ತುಗಳ ಖರೀದಿಗಾಗಿ ಧಾವಿಸಿದ್ದು, ಹೂವು, ಹಣ್ಣು, ಕಬ್ಬು, ಸಕ್ಕರೆ, ಎಳ್ಳು ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬದ ಪ್ರಯುಕ್ತ ಕೆಲವರು ಹೊಸ ಬಟ್ಟೆ ಖರೀದಿಸಿದ್ದು, ನಾಳೆ ಹೆಣ್ಣು ಮಕ್ಕಳು ಮನೆ ಮನೆಗೆ ಎಳ್ಳು ಬೀರಲು ತೆರಳಲು ಭರದ ಸಿದ್ಧತೆ ನಡೆಸಿದ್ದಾರೆ.
ಜಗತ್ತಿಗೇ ಬೆಳಕನ್ನು ನೀಡುವ ಸೂರ್ಯ ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ. ಎಲ್ಲದಕ್ಕೂ ಮೂಲ ಸೂರ್ಯ. ಈತ ಮಕರ ರಾಶಿಗೆ ಪ್ರವೇಶಿಸುವ ಕಾಲ ಮಕರ ಸಂಕ್ರಮಣವಾಗಿದೆ.
ಹಿಂದೂ ಧರ್ಮದಲ್ಲಿ ವರ್ಷವಿಡೀ ಆಚರಿಸಲಾಗುವ ಹಬ್ಬಗಳಲ್ಲಿ, ಮಕರ ಸಂಕ್ರಾಂತಿಯ ಹಬ್ಬವು ವಿಶೇಷವಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಹಬ್ಬವಾಗಿದ್ದು, ಇದನ್ನು ಭಾರತದಲ್ಲಿ ಬಹಳ ಬೃಹತ್ ಸ್ವರೂಪದಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಸೂರ್ಯ ಮಕರ ಸಂಕ್ರಾಂತಿಗೆ ಪ್ರವೇಶಿಸಿದ ದಿನ ಎಂದು ಆಚರಿಸಲಾಗುತ್ತದೆ.
ಯಾವ ದಿನ ಸೂರ್ಯ ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೋ ಅಂದೇ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಮಕರ ಸಂಕ್ರಾಂತಿ, ಶನಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ತನ್ನ ಮಗ ಶನಿಯ ಮನೆಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಈ ದಿನವು ಬಹಳ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಪುರಾಣ ತಿಳಿಸುತ್ತದೆ. ಮಕರ ಸಂಕ್ರಾಂತಿಯ ಹಬ್ಬದ ಮಹತ್ವವನ್ನು ಹೆಚ್ಚಿಸುವ ಮಕರ ಸಂಕ್ರಾಂತಿಯ ದಿನದಿಂದ ಉತ್ತರಾಯಣ ಪ್ರಾರಂಭವಾಗುತ್ತದೆ. ಇದು ಮಕರ ಸಂಕ್ರಾಂತಿಯ ಹಬ್ಬದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಉತ್ತರಾಯಣದ ಆರಂಭದೊಂದಿಗೆ, ದಿನವು ದೊಡ್ಡದಾಗಲು ಪ್ರಾರಂಭವಾಗುತ್ತದೆ ಮತ್ತು ರಾತ್ರಿಗಳು ಕಡಿಮೆಯಾಗುತ್ತವೆ. ಸೂರ್ಯನು ಉತ್ತರದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾನೆ. ಮಕರ ಸಂಕ್ರಾಂತಿಯ ದಿನದಂದು, ಧನುರ್ಮಾಸ ಕೊನೆಗೊಳ್ಳುತ್ತದೆ. ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.
ಮಕರ ಸಂಕ್ರಾಂತಿಯ ದಿನದ ಸಂಜೆ ಎತ್ತುಗಳನ್ನು ಕಿಚ್ಚು ಹಾಯಿಸುವ ಮೂಲಕ ಕೂಡಾ ರೈತಾಪಿ ಜನರು ಹಬ್ಬದ ಖುಷಿಯನ್ನು ಅನುಭವಿಸುತ್ತಾರೆ. ಜತೆಗೆ, ಗಾಳಿಪಟ ಹಾರಿಸಿ, ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಖುಷಿಯಿಂದ ಕಾಲ ಕಳೆಯುವ ಮೂಲಕ ಜನರು ಹಬ್ಬವನ್ನು ಸಂಭ್ರಮಿಸುತ್ತಾರೆ. ಮಕರ ಸಂಕ್ರಾಂತಿಯ ಈ ಪರ್ವ ಕಾಲವು ಸರ್ವರಿಗೂ ಒಳಿತನ್ನುಂಟು ಮಾಡಲಿ.