ಸಂಕ್ರಾಂತಿ ಹಬ್ಬಕ್ಕೆ ತೆರಳುವ ವಿಚಾರದಲ್ಲಿ ಜಗಳ: ಪತ್ನಿ ಕೊಂದ ಪತಿ

ಕಲಬುರಗಿ,ಜ.14-ಸಂಕ್ರಾಂತಿ ಹಬ್ಬಕ್ಕೆ ತವರು ಮನೆಗೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿ ನಡುವೆ ಜಗಳ ನಡೆದು ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಓಜಾ ಲೇಔಟ್‍ನಲ್ಲಿ ನಡೆದಿದೆ.
ಆರತಿ ರಾಠೋಡ್(28) ಕೊಲೆಯಾದ ಗೃಹಿಣಿಯಾಗಿದ್ದಾಳೆ.
ಕಳೆದ ರಾತ್ರಿ ಪತಿ – ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ಪತಿ ತಾರಾಸಿಂಗ್ ಸಿಲಿಂಡರ್ ಅನ್ನು ತಲೆಯ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ಪರಾರಿಯಾಗಿರುವ ತಾರಾಸಿಂಗ್‍ನ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ಆರತಿ ಹಾಗೂ ತಾರಾಸಿಂಗ್ ರಾಠೋಡ್ ಮದುವೆಯಾಗಿದ್ದರು. ಪದೇ ಪದೆ ತವರು ಮನೆಗೆ ಹೋಗುವ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು, ಗುರುವಾರ ಕೂಡ ಸಂಕ್ರಾಂತಿಗೆ ತವರು ಮನೆಗೆ ಹೋಗುವ ವಿಚಾರವಾಗಿ ಗಲಾಟೆ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ ಎನ್ನಲಾಗಿದೆ.
ಇನ್ನು ತಾರಾಸಿಂಗ್ ಕಲಬುರಗಿಯ ಖಾಸಗಿ ಶಾಲೆಯ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.