ಸಂಕ್ರಾಂತಿ:  ಸರ್ಕಾರಿ ಶಾಲೆಯಲ್ಲಿ ‘ಗಾಳಿಪಟ-ರಂಗೋಲಿ’ ಚಿತ್ತಾರ ಸಂಭ್ರಮದ ಆಚರಣೆ

ತೆಕ್ಕಲಕೋಟೆ ಜ 15 : ಭಾರತದಲ್ಲಿ ಆಚರಿಸಲಾಗುವ ವರ್ಷದ ಮೊದಲ ಪ್ರಮುಖ ಹಬ್ಬ ಮಕರ ಸಂಕ್ರಾಂತಿಯಾಗಿದ್ದು, ಈ ಹಬ್ಬವು ಜನವರಿ 14 ರಂದು ಭೋಗಿ 15 ರಂದು ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. 

 ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ (ಪಿಂಜಾರ ಗೇರಿ) ಶಾಲೆಯಲ್ಲಿ  ಮಕ್ಕಳೆ ಸ್ವಯಂ ಪ್ರೇರಿತರಾಗಿ ತಯಾರಿಸಿದ ಗಾಳಿಪಟಗಳನ್ನು ಹಾರಿಸಿ ಸಂತೋಷದಿಂದ ಸಂಭ್ರಮ ಪಟ್ಟರು, ಮಕ್ಕಳಿಂದ‌ ರಂಗೋಲಿ ಸ್ಪರ್ಧೆ ಹಾಗೂ ಗಾಳಿಪಟ ಹಾರಿಸುವುದರ ಮೂಲಕ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಮಕ್ಕಳು ಸೇರಿ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.

 ಮಕರ ಸಂಕ್ರಾಂತಿಯನ್ನು ಗಾಳಿಪಟ ಹಬ್ಬ ಮತ್ತು ಗಾಳಿಪಟ ಹಾರಿಸುವ ಹಬ್ಬ ಎಂದೂ ಕರೆಯಲಾಗುತ್ತದೆ.‌ ಈ ದಿನ ಗಾಳಿಪಟ ಹಾರಾಟಕ್ಕೂ ತನ್ನದೇ ಆದ ಮಹತ್ವವಿದೆ.ಈ ಸಂದರ್ಭದಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಅನೇಕ ಧಾರ್ಮಿಕ ಕಥೆಗಳಿವೆ. ಈ ಸಂದರ್ಭದಲ್ಲಿ ಭಗವಾನ್ ರಾಮನು ಗಾಳಿಪಟವನ್ನು ಹಾರಿಸಲು ಪ್ರಾರಂಭಿಸಿದನು ಎಂದು ನಂಬಲಾಗಿದೆ, ಅಂದಿನಿಂದ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಗಾಳಿಪಟ ಹಾರಾಟಕ್ಕೆ ಸಾಮಾಜಿಕ ಮತ್ತು ವೈಜ್ಞಾನಿಕ ಪ್ರಾಮುಖ್ಯತೆಯನ್ನು ಸಹ ಲಗತ್ತಿಸಲಾಗಿದೆ ಎಂದು ಮುಖ್ಯ ಗುರು ಕೆ.ನಾಗರಾಜ ತಿಳಿಸಿದರು.

 ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ. ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷ ಪಡುವ ಸಡಗರ. ಮನೆಯನ್ನು ಶುದ್ಧಿಗೊಳಿಸುವುದು, ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು, ಮೂರನೆಯ ದಿನ ಹೊಸ ಫಸಲನ್ನು ಉಂಡು ಸಂತೋಷಪಡಲು ಎಲ್ಲಾ ಸನ್ನದ್ಧತೆ ನಡೆಸುತ್ತಾರೆ. ಮನೆಯ ಮುಂದೆ ವಿವಿಧ ರೀತಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕಾರ ಮಾಡಿ ಆಚರಿಸಲಾಗುತ್ತದೆ ಅದ್ದರಿಂದ ಈ ದಿನ  ಶಾಲೆಯಲ್ಲಿ ಮಕ್ಕಳಿಂದ‌ ರಂಗೋಲಿ ಹಾಕಿಸಿ ಸಂತೋಷ ಸಡಗರ ದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು ಎಂದು ಚಿತ್ರಕಲೆ ಶಿಕ್ಷಕಿ ವೈ.ಎಸ್ ರೇಖಾ ಹೇಳಿದರು. 

  ಅಧ್ಯಕ್ಷ ಎಸ್.ಇಮಾಮ್ ಹುಸೇನ್, ಗೌರವ ಶಿಕ್ಷಕ ಟಿ.ಸಿದ್ದಯ್ಯ, ಶಾಲಾ ಮಾತೆ ರಾಘಮ್ಮ, ಅಥಿತಿ ಶಿಕ್ಷಕರಾದ  ವೈ.ಮಹಭಾಷ, ಕೆ.ಭಾಷಸಾಬ್, ದೂಡ್ಡ ಬಸಪ್ಪ, ಸುಭಾನ್ ಬಿ, ನೇತ್ರಾವತಿ, ನಾಗಶ್ರೀ ಹಾಗೂ ಮಕ್ಕಳು ಇದ್ದರು.