ಸಂಕ್ರಾಂತಿಯ ನಂತರ ಮಚ್ಚಿಬಜಾರ್ ಅಗಲೀಕರಣ

ರಾಯಚೂರು.ಜ.೧೨- ನಗರದ ತೀನ್ ಖಂದೀಲ್‌ನಿಂದ ಅಶೋಕ ಡಿಪೋ ರಸ್ತೆ ಅಗಲೀಕರಣ ಕಾರ್ಯ ಸಂಕ್ರಾಂತಿಯ ನಂತರ ಆರಂಭಿಸುವುದಾಗಿ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರು ಹೇಳಿದರು.
ಈಗಾಗಲೇ ಈ ರಸ್ತೆಗೆ ಸಂಬಂಧಿಸಿ ಎಲ್ಲಾ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿವೆ. ಆದರೆ, ಲೋಕೋಪಯೋಗಿ ಇಲಾಖೆ ಸಂಬಂಧಪಟ್ಟ ಗುತ್ತೇದಾರರಿಗೆ ಕಾರ್ಯಾದೇಶ ನೀಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಮಾಸ್ಟರ್ ಪ್ಲ್ಯಾನ್ ನಕ್ಷೆಯಂತೆ ಈ ರಸ್ತೆ ೬೦ ಅಡಿ ನಮೂದಾಗಿದೆ. ಕನಿಷ್ಟ ೫೫ ಅಡಿ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ, ಅಲ್ಲಿಯ ವಾಸ್ತವಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ೫೦ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿತ್ತು.
ಇದರನ್ವಯ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಅಗಲೀಕರಣ ಪ್ರಕ್ರಿಯೆಯಲ್ಲಿ ತೆರವು ಕಾರ್ಯಾಚರಣೆ ಟೆಂಡರ್ ವೈ.ಸತೀಶ ಅವರಿಗೆ ಆಗಿದೆ. ರಸ್ತೆ ಕಾಮಗಾರಿ ವೀರೇಶ ಗುತ್ತೇದಾರರು ತೆಗೆದುಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಾರ್ಯಾದೇಶ ನೀಡದಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಕಾರ್ಯಾದೇಶದೊಂದಿಗೆ ಕಾಮಗಾರಿ ಆರಂಭಿಸಲು ಗುತ್ತೇದಾರರು ನಿರ್ಧಾರಿಸಿದ್ದರಿಂದ ಸಂಕ್ರಾಂತಿ ನಂತರ ಉದ್ದೇಶಿತ ಕಾಮಗಾರಿ ಆರಂಭಗೊಳ್ಳಲಿದೆ. ತೀನ್ ಖಂದೀಲ್‌ನಿಂದ ಅಶೋಕ ಡಿಪೋವರೆಗೆ ಅಗಲೀಕರಣ, ವಿದ್ಯುತ್ ಕಂಬ ಸ್ಥಳಾಂತರ ಹಾಗೂ ಇನ್ನಿತರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
೫೦ ಅಡಿ ರಸ್ತೆ ಅಗಲೀಕರಣಕ್ಕೆ ಅಲ್ಲಿಯ ಮಾಲೀಕರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಾಮಗಾರಿ ಶೀಘ್ರ ಆರಂಭಿಸಲಾಗುತ್ತದೆ. ನಗರಸಭೆ ಮತ್ತು ಜಿಲ್ಲಾಡಳಿತ ಉದ್ದೇಶಿತ ಕಾಮಗಾರಿಗಳಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.