ಸಂಕ್ರಾಂತಿಗೆ ರಾಮಮಂದಿರ ಭಕ್ತರಿಗೆ ಮುಕ್ತ

ಅಯೋಧ್ಯೆ,ಜೂ.೨೧-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ಮುಂದಿನ ವರ್ಷದ ಜನವರಿ ೧೪ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಭಕ್ತರಿಗಾಗಿ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
೧೦ ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿರುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದರು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಉತ್ತರ ಪ್ರದೇಶದ ಅಯೋಧ್ಯೆಯ ಹೊಸ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಮಕರ ಸಂಕ್ರಾಂತಿ ಹಬ್ಬದಂದು ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ ೨೦೨೪ರ ಜನವರಿಯಲ್ಲಿ ದೇವಾಲಯವನ್ನು ಭಕ್ತರಿಗೆ ತೆರೆಯಲಾಗುವುದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿರುವ ದೇವಾಲಯದ ನೆಲ ಮಹಡಿಯ ನಿರ್ಮಾಣ ಪ್ರಕ್ರಿಯೆ ಮುಗಿದ ನಂತರ ರಾಮ ಕಥಾಕ್ಕೆ ಮೀಸಲಿಡಲಾಗುವುದು ಎಂದು ನೃಪೇಂದ್ರ ಮಿಶ್ರಾ ಹೇಳಿದರು. ದೇವಾಲಯವು ನೆಲ ಅಂತಸ್ತಿನಲ್ಲಿ ೧೬೦ ಅಂಕಣಗಳು, ಮೊದಲ ಮಹಡಿಯಲ್ಲಿ ೧೩೨ ಅಂಕಣಗಳು ಮತ್ತು ಎರಡನೇ ಮಹಡಿಯಲ್ಲಿ ೭೪ ಅಂಕಣಗಳನ್ನು ಹೊಂದಿದೆ. ದೇವಾಲಯ ನಿರ್ಮಾಣ ನಾಗರ ಶೈಲಿ ವಾಸ್ತುಶಿಲ್ಪವನ್ನು ಹೊಂದಿದೆ.
ದೇವಾಲಯದ ೧೬೧ ಅಡಿ ಎತ್ತರದ ಶಿಖರವನ್ನು ಚಿನ್ನದ ಹೊದಿಕೆ ಹೊಂದಿಸಲಾಗಿದೆ. ಗರ್ಭಗುಡಿಯ ಮುಖ್ಯ ಬಾಗಿಲುಗಳಿಗೂ ಹೊದಿಕೆ ಹೊಂದಿಸಲಾಗಿದೆ ಉಕ್ಕು ಅಥವಾ ಇಟ್ಟಿಗೆಗಳನ್ನು ಬಳಸಲಾಗಿಲ್ಲ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ತಯಾರಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ಹಲವಾರು ಭಾರತೀಯ ರಾಯಭಾರ ಕಚೇರಿಗಳು ವಿವಿಧ ಕಾರ್ಯಕ್ರಮಗಳಿಗೆ ತಯಾರಿ ನಡೆಸುತ್ತಿವೆ. ಭಗವಾನ್ ರಾಮನನ್ನು ಮಗುವಿನ ರೂಪದಲ್ಲಿ ಪೂಜಿಸಲಾಗುತ್ತದೆ, ಇದನ್ನು ರಾಮ್ ಲಲ್ಲಾ ಎಂದೂ ಕರೆಯಲಾಗುತ್ತದೆ.
ದೇವಾಲಯದ ನಿರ್ಮಾಣವು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ೧೯೯೦ ರ ದಶಕದಲ್ಲಿ ರಾಷ್ಟ್ರೀಯ ಚುನಾವಣಾ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಚಳುವಳಿ ಪ್ರಮುಖ ಪಾತ್ರ ವಹಿಸಿತು.