ಸಂಕ್ರಾಂತಿಗೆ ಮಹತ್ವದ ಬದಲಾವಣೆ: ಯತ್ನಾಳ್ ಸಿಡಿಸಿದ ಹೊಸ ಬಾಂಬ್

ವಿಜಯಪುರ, ಡಿ ೨೫- ಸದಾ ಒಂದಲ್ಲಾ ಒಂದು ರೀತಿಯಲ್ಲಿ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿರುವ ಶಾಸಕ ಬಸವನಗೌಡ ಪಾಟೀಲ್,ಸಂಕ್ರಾಂತಿಗೆ ಸಚಿವ ಸಂಪುಟ ಮಾತ್ರವಲ್ಲ ಮಹತ್ವದ ಬದಲಾವಣೆಯಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಕರ ಸಂಕ್ರಾಂತಿಗೆ ಸೂರ್ಯ ತನ್ನ ಪಥವನ್ನು ಬದಲಾಯಿಸಿ ಉತ್ತರಾಯಣ ಆರಂಭ ಗಾಯಲಿರುವುದರಿಂದ ಉತ್ತರ ಕರ್ನಾಟಕಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.
ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.ಮಂತ್ರಿ ಸ್ಥಾನದಲ್ಲಿ ತಮ್ಮ ಹೆಸರೂ ಇಲ್ಲ. ಇನ್ನೂ ಮುಂದೆ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಬರೆಯಬೇಡಿ ಎಂದು ಮನವಿ ಮಾಡಿದರು.
ವಿಜಯಪುರದಲ್ಲಿ ನೂತನವಾಗಿ ಆರಂಭವಾಗಿರುವ ಐಆರ್‌ಬಿ ಬೆಟಾಲಿಯನ್ ಉದ್ಘಾಟನೆ ಸಂಬಂಧ ಜನವರಿ ೧೬ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯಪುರಕ್ಕೆ ಬರಲಿದ್ದಾರೆ. ಅವರು ಬರುವ ಮೊದಲೇ ಭಾರಿ ಬದಲಾವಣೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.