ಸಂಕ್ರಾಂತಿಗೆ ಟರ್ಮಿನಲ್ -2 ಕಾರ್ಯಾರಂಭ

ದೇವನಹಳ್ಳಿ, ಜ. ೧೨- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿರುವ ಉದ್ಯಾನವನ ಮಾದರಿಯ ಹಚ್ಚ ಹಸಿರಿನ ಪರಿಸರ ಸ್ನೇಹಿ ಟರ್ಮಿನಲ್-೨ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.
ಜನವರಿ ೧೫ ರಂದು ಸ್ಟಾರ್ ಏಷ್ಯಾ ಸಂಸ್ಥೆಯ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ಟೇಕ್ ಆಫ್ ಆಗುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್೨ ಸಾರ್ವಜನಿಕ ಸೇವೆಗೆ ಕಾರ್ಯಾರಂಭ ಮಾಡಲಿದೆ.
ಜ.೧೫ರ ಭಾನುವಾರ ಬೆಳಗ್ಗೆ ೮:೪೦ಕ್ಕೆ ಟರ್ಮಿನಲ್ -೨ ನಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣಿಸುವ ಸ್ಟಾರ್ ಏಷ್ಯಾ ವಿಮಾನ ಟೇಕ್ ಆಫ್ ಆಗಲಿದೆ. ಇದು ಟರ್ಮಿನಲ್೨ ನಿಂದ ಟೇಕ್ ಆಫ್ ಆಗುವ ಮೊದಲ ವಿಮಾನವಾಗಲಿದೆ.
ಶೀಘ್ರದಲ್ಲೇ ಏರ್ ಏಷ್ಯಾ, ಏರ್ ಇಂಡಿಯಾ, ವಿಸ್ತಾರ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಟರ್ಮಿನಲ್-೨ ನಿಂದ ತಮ್ಮ ಸೇವೆ ಆರಂಭಿಸಲಿವೆ. ಪ್ರಾರಂಭದಲ್ಲಿ ಟರ್ಮಿನಲ್-೨ ದೇಶಿಯ ವಿಮಾನಗಳ ಹಾರಾಟಕ್ಕೆ ಮಾತ್ರ ಸೀಮಿತವಾಗಿರಲಿದೆ.
ಕಳೆದ ವರ್ಷ ನವೆಂಬರ್ ೧೧ರಂದು ಪ್ರಧಾನಿ ನರೇಂದ್ರ ಮೋದಿಯವರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ -೨ ಅನ್ನು ಉದ್ಘಾಟನೆಗೊಳಿಸಿದ್ದರು. ಪ್ರಯಾಣಿಕರ ಮನ ತಣಿಸಲು ಟರ್ಮಿನಲ್ ಅನ್ನು ಉದ್ಯಾನದಂತೆ ಸಿಂಗಾರಗೊಳಿಸಲಾಗಿದೆ.
ಸದ್ಯ ಟರ್ಮಿನಲ್ -೧ ರಲ್ಲಿ ವಾರ್ಷಿಕವಾಗಿ ೧.೬ ಕೋಟಿ ಪ್ರಯಾಣಿಕರು ಬಂದು ಹೋಗುತ್ತಾರೆ. ಇಲ್ಲಿನ ಪ್ರಯಾಣಿಕರ ದಟ್ಟಣೆಯ ಕಾರಣದಿಂದಾಗಿ ಎರಡನೇ ಟರ್ಮಿನಲ್ ನಿರ್ಮಾಣ ಮಾಡಲಾಗಿತ್ತು. ಇದು ವರ್ಷಕ್ಕೆ ೨ ಕೋಟಿಗೂ ಅಧಿಕ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಟರ್ಮಿನಲ್-೨ನ ಎಂಟ್ರಿ ಹೊಸ ಲೋಕಕ್ಕೆ ಹೋದಂತಹ ಅನುಭವ ನೀಡಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಟರ್ಮಿನಲ್-೨ ಕಾರ್ಯಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ.