
ಢಾಕಾ, ಆ.೧೪- ವಿಶ್ವಸಂಸ್ಥೆಯ ಆಹಾರ ಪಡಿತರದಲ್ಲಿ ಈ ವರ್ಷ ಭಾರೀ ಕಡಿತವಾಗಿದ್ದು, ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯುತ್ತಿರುವ ಮ್ಯಾನ್ಮಾರ್ ರೋಹಿಂಗ್ಯಾ ನಿರಾಶ್ರಿತರು ಇದೀಗ ಸಮಸ್ಯೆಗೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ನೆರವಿನಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತರಿಗೆ ವಿಶ್ವಸಂಸ್ಥೆಯ ಆಹಾರ ಯೋಜನೆಯಡಿ ಪ್ರತೀ ತಿಂಗಳಿಗೆ ತಲಾ ೧೨ ಡಾಲರ್ ಮೊತ್ತವನ್ನು ಆಹಾರ ಪಡಿತರ ವೆಚ್ಚವಾಗಿ ಒದಗಿಸಲಾಗುತ್ತಿತ್ತು. ಕಳೆದ ಮಾರ್ಚ್‌ಲ್ಲಿ ಈ ಮೊತ್ತವನ್ನು ೧೦ ಡಾಲರ್ ಗೆ ಇಳಿಸಿದ್ದರೆ, ಜೂನ್ ಆರಂಭದಲ್ಲಿ ೮ ಡಾಲರ್‌ಗೆ ಮತ್ತಷ್ಟು ಇಳಿಸಲಾಗಿತ್ತು. ಹಣದ ಕೊರತೆಯಿಂದ ಈ ಕಡಿತ ಅನಿವಾರ್ಯ ಎಂದು ವಿಶ್ವಸಂಸ್ಥೆ ಹೇಳಿದೆ. ಆಹಾರ ಪಡಿತರ ನೆರವು ಕಡಿತವು ೧ ದಶಲಕ್ಷಕ್ಕೂ ಅಧಿಕ ರೊಹಿಂಗ್ಯಾ ಜನರ ಮೇಲೆ ಪರಿಣಾಮ ಬೀರಿದೆ. ಮ್ಯಾನ್ಮಾರ್‌ನಲ್ಲಿ ೨೦೧೭ರಲ್ಲಿ ಸೇನೆ ನಡೆಸಿದ ಮಾರಣಾಂತಿಕ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನೆರೆಯ ದೇಶ ಬಾಂಗ್ಲಾಕ್ಕೆ ಓಡಿಬಂದ್ದಿದ್ದು, ಸದ್ಯ ಇಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದ ರೊಹಿಂಗ್ಯಾ ಶಿಬಿರಗಳಿಗೆ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್(ಯುಎನ್‌ಎಚ್ಸಿಆರ್) ಹಾಗೂ ಒಐಸಿಯ ಜಂಟಿ ನಿಯೋಗ ಭೇಟಿ ನೀಡಿದ ಬಳಿಕ, ಒಐಸಿ ತಮ್ಮ ನೆರವಿಗೆ ಬರಬಹುದು ಎಂಬ ಆಶಾಭಾವನೆ ರೊಹಿಂಗ್ಯಾ ಸಮುದಾಯದಲ್ಲಿ ಮೂಡಿದೆ.‘ಸುಸ್ಥಿರ ಮತ್ತು ಗೌರವಾನ್ವಿತ ವಾಪಸಾತಿ ಸಾಧ್ಯವಾಗುವ ತನಕ ನಮ್ಮ ಮಕ್ಕಳಿಗೆ ಸಾಕಷ್ಟು ಆಹಾರವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ನಿಧಿಯನ್ನು ರಚಿಸುವಂತೆ ಒಐಸಿ ಮತ್ತು ಯುಎನ್‌ಎಚ್ಸಿಆರ್‌ಗೆ ಮನವಿ ಸಲ್ಲಿಸಲಾಗಿದೆ. ಅಂತಾರಾಷ್ಟ್ರೀಯ ನಿಯೋಗ, ಸಂಘಟನೆಗಳು ನಮ್ಮನ್ನು ನಿರಂತರ ಭೇಟಿಯಾಗುತ್ತಿದ್ದರೂ ಯಾರು ಕೂಡಾ ನಮ್ಮ ಭವಿಷ್ಯದ ಬಗ್ಗೆ ಯಾರೂ ಗ್ಯಾರಂಟಿ ನೀಡಿಲ್ಲ. ಆದರೆ ನಮಗೆ ಒಐಸಿಯ ಮೇಲೆ ಭರವಸೆಯಿದೆ’ ಎಂದು ‘ಶಾಂತಿ ಮತ್ತು ಮಾನವ ಹಕ್ಕುಗಳ ಕುರಿತ ಅರಾಕನ್ ರೊಹಿಂಗ್ಯಾ ಸೊಸೈಟಿ(ಎಆರ್‌ಎಸ್ಪಿಎಚ್) ಅಧ್ಯಕ್ಷ ಮುಹಮ್ಮದ್ ಝುಬೇರ್ರನ್ನು ಉಲ್ಲೇಖಿಸಿ ಅರಬ್ ನ್ಯೂಸ್ ವರದಿ ಮಾಡಿದೆ. ಬಾಂಗ್ಲಾದ ಕಾಕ್ಸ್ ಬಜಾರ್‌ನಲ್ಲಿರುವ ಈ ಸಂಸ್ಥೆ ರೊಹಿಂಗ್ಯಾಗಳ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಕೆಲಸ ಮಾಡುತ್ತಿದೆ. ವಿಶ್ವ ಆಹಾರ ಯೋಜನೆಯಡಿ ಒದಗಿಸಲಾಗುವ ನೆರವನ್ನು ನಾವು ಸಂಪೂರ್ಣವಾಗಿ ಅವಲಂಬಿಸಿದ್ದೇವೆ. ಆದರೆ ಒಬ್ಬ ವ್ಯಕ್ತಿಗೆ ತಿಂಗಳಿಗೆ ಕೇವಲ ೮ ಡಾಲರ್ ಹಣ ಸಾಕಾಗುತ್ತದೆಯೇ? ನಿರಾಶ್ರಿತರ ಶಿಬಿರದಲ್ಲಿ ಹಿಂಸೆ, ಅಪೌಷ್ಟಿಕತೆಯ ಸಮಸ್ಯೆಯೂ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂದು ಝುಬೇರ್ ಹೇಳಿದ್ದಾರೆ.