ಸಂಕಷ್ಟದಲ್ಲಿ ಜಾಹೀರಾತು ಹೆಚ್‌ಡಿಕೆ ಕಿಡಿ

ಬೆಂಗಳೂರು,ಏ.೨೨- ಬೆಂಗಳೂರು ಮೆಟ್ರೊ ೨ಎ ಮತ್ತು ೨ಬಿ ಯೋಜನೆಗೆ ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರಮೋದಿ ಅವರನ್ನು ಅಭಿನಂದಿಸಿ ರಾಜ್ಯಸರ್ಕಾರ ಜಾಹೀರಾತು ಬಿಡುಗಡೆ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಕೋವಿಡ್‌ನ ಈ ಸಂಕಷ್ಟದ ಸಂದರ್ಭದಲ್ಲಿ ಜನ ಸಾಯುತ್ತಿದ್ದಾರೆ. ಬೆಡ್ ಇಲ್ಲ, ಔಷಧಿ ಇಲ್ಲ ಇಂತಹ ಸಂದರ್ಭದಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿ ಹಣ ಪೋಲು ಮಾಡುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ಜಾಹೀರಾತು ನೀಡಿರುವುದನ್ನು ನೋಡಿದರೆ ಇನ್ನು ಬುದ್ಧಿ ಕಲಿತಿಲ್ಲ ಎನಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಭಿಕ್ಷೆ ಅಲ್ಲ, ನ್ಯಾಯಬದ್ಧವಾಗಿ ಯೋಜನೆ ಮಂಜೂರು ಮಾಡಿದೆ.
ಹೀಗಿರುವಾಗ ಜಾಹೀರಾತು ನೀಡುವ ಅಗತ್ಯವಿರಲಿಲ್ಲ ಎಂದರು.
ಸಾವಿನ ಮನೆಯಲ್ಲಿ ನಾವಿದ್ದೇವೆ. ಹೀಗಿರುವಾಗ ಕೋಟ್ಯಂತರ ರೂ. ಹಣ ಖರ್ಚು ಮಾಡಿರುವುದು ಸರ್ಕಾರಕ್ಕೆ ಬುದ್ಧಿ ಬಂದಿಲ್ಲ ಎಂಬುದನ್ನು ನೋವಿನಿಂದ ಹೇಳುತ್ತಿದ್ದೇನೆ. ಜನರ ಜತೆ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ಹೊರಹಾಕಿದ ಅವರು ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಜನ ರೊಚ್ಚಿಗೇಳುವ ಕಾಲ ದೂರವಿಲ್ಲ ಎಂದಿದ್ದಾರೆ.