ಸಂಕಷ್ಟದಲ್ಲಿ ಕರ್ತವ್ಯಕ್ಕೆ ಗೈರಾದರೆ ಕಠಿಣಕ್ರಮ

ದೇವದುರ್ಗ,ಜೂ.೦೧-ಕೋವಿಡ್ ಸಂಕಷ್ಟ ಕಾಲದಲ್ಲಿ ವೈದ್ಯರು ತಮಗೆ ವಹಿಸಿದ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಇಂಥ ಸಂಕಷ್ಟ ಕಾಲದಲ್ಲಿ ಕರ್ತವ್ಯಕ್ಕೆ ಗೈರಾದರೆ, ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಎಚ್ಚರಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯರು ಕೆಲಸಕ್ಕೆ ಬರುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ. ಲಾಕ್‌ಡೌನ್ ಸಮದಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗಬಾರದು. ಆಸ್ಪತ್ರೆಯಲ್ಲಿ ವಿವಿಧ ಪಾಳಿಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರ ಬಗ್ಗೆ ನಿಗಾವಹಿಸಿ, ಮಾಹಿತಿ ನೀಡುವಂತೆ ತಹಸೀಲ್ದಾರ್ ಮಾಧುರಾಜ್ ಯಾಳಗಿಗೆ ಸೂಚಿಸಿದರು.
ಕೋವಿಡ್-೧೯ ಸೋಂಕು ಸಂಕಷ್ಟವನ್ನು ತಂದೊಡ್ಡಿದೆ. ಇಂಥ ಸನ್ನಿವೇಶದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿ, ಗುಣಪಡಿಸಬೇಕು. ವೈದ್ಯರು ತಮ್ಮ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸಬೇಕು. ಇಂಥ ಸಂದರ್ಭದಲ್ಲಿ ಕರ್ತವ್ಯಕ್ಕೆ ಗೈರಾಗುವ ವೈದ್ಯರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿ ಭಾರತೀಯ ಮೆಡಿಕಲ್ ಕೌನ್ಸಿಲ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ಗೆ ಲಿಖಿತವಾಗಿ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಕರ್ತವ್ಯಕ್ಕೆ ಗೈರಾಗುವ ವೈದ್ಯರಿಗೆ ಕನಿಷ್ಠ ೫ವರ್ಷಗಳ ಕಾಲ ಅಮಾನತು ಮಾಡುವ ಕ್ರಮಕೈಗೊಳ್ಳಲಾಗುವುದು. ಅವರಿಗೆ ನೋಟಿಸ್ ನೀಡಿ ಕಾದುಕುಳಿತುಕೊಳ್ಳುವ ಸಮಯವಿದಲ್ಲ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈ ಬಗ್ಗೆ ವರದಿ ಸಲ್ಲಿಸಬೇಕು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಆರ್.ಎಸ್.ಹುಲಿಮನಿಗೆ ತಾಕೀತು ಮಾಡಿದರು.
ತಹಸೀಲ್ದಾರ್ ಮಾಧುರಾಜ್ ಯಾಳಗಿ, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಹುಲಿಮನಿಗೌಡ, ಜನರಲ್ ಸರ್ಜನ್ ಡಾ.ಶಿವಾನಂದ ಚಂದನವರ್, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಇತರರಿದ್ದರು.
ಪರಿಶೀಲನೆ:
ಇದಕ್ಕು ಮೊದಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿಗತಿ ಪರಿಸೀಲನೆ ನಡೆಸಿದರು. ಶೌಚಾಲಯ ಪರಿಶೀಲಿಸಿ, ಎರಡು ಗಂಟೆಗೊಮ್ಮೆ ನೀರು ಹಾಗೂ ಬಿಚಿಂಗ್ ಪೌಡರ್ ಸೇರಿ ಅಗತ್ಯ ವಸ್ತುಗಳನ್ನು ಬಳಸಿ ಶುಚಿಗೊಳಿಸಲು ಸೂಚಿಸಿದರು. ನಂತರ ಐಸಿಯು, ವೆಂಟಿಲೇಟರ್ ಹಾಗೂ ಇತರ ವಾರ್ಡ್‌ಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಆಸ್ಪತ್ರೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.