ಸಂಕಷ್ಟದಲ್ಲಿರುವ ರೈತರಿಗೆ ಮಠಗಳಿಂದಲೇ ಒಳ್ಳೆಯ ಬೀಜಗಳ ವಿತರಣೆ: ಶಖಾಪೂರ ಶ್ರೀಗಳು

ಕಲಬುರಗಿ:ನ.13:ಕೊರೋನಾ ಭೀತಿ ಹಾಗೂ ಅತಿವೃಷ್ಟಿ, ನೆರೆ ಹಾವಳಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟದಲ್ಲಿ ಅನ್ನದಾತರಿಗೆ ನೆರವಾಗಲು ಮಠಗಳಿಂದಲೇ ಒಳ್ಳೆಯ ಬೀಜಗಳನ್ನು ವಿತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಿವಾಚಾರ್ಯ ಸಂಘದ ಜಿಲ್ಲಾಧ್ಯಕ್ಷರಾದ ಶಖಾಪೂರ ತಪೋವನದ ಡಾ. ಸಿದ್ಧರಾಮ್ ಶಿವಾಚಾರ್ಯರು ಹೇಳಿದರು.
ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಅಖಿಲ ಭಾರತ ವೀರಶೈವ ಮಹಾಸಭೆಯು ಶ್ರೀ ಶರಣಬಸವೇಶ್ವರ್ ಸಂಸ್ಥಾನದ ಬಸವರಾಜಪ್ಪ ಅಪ್ಪಾ ಅವರ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಠಗಳು ಧಾರ್ಮಿಕ ಕೆಲಸದ ಜೊತೆಗೆ ಅನ್ನದಾತನ ಕಡೆಗೆ, ಕೃಷಿ ಕಡೆಗೆ ಗಮನಕೊಡಬೇಕಾಗಿದೆ ಎಂದರು.
ಹಿಂದಿನ ದಿನಗಳಲ್ಲಿ ಮಠಗಳಿಂದಲೇ ಒಳ್ಳೆಯ ಬೀಜಗಳನ್ನು ಪಡೆದು ಒಳ್ಳೆಯ ಬೆಳೆ ಬೆಳೆಯುತ್ತಿದ್ದ ಅನ್ನದಾತ ಇಂದು ಕಷ್ಟದಲ್ಲಿದ್ದಾನೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಮಠಗಳಿಂದ ಎಲ್ಲ ತರಹದ ಬೀಜಗಳನ್ನು ಮಠದಲ್ಲಿ ಸಂಗ್ರಹಿಸಿ ಮಠಗಳಿಂದಲೇ ಅನ್ನದಾತನಿಗೆ ಬೀಜ ವಿತರಿಸುವಂತಹ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ಲಿಂಗರಾಜಪ್ಪ ಅಪ್ಪಾ ಅವರು ಮಾತನಾಡಿ, ಮಠಗಳು ಧಾರ್ಮಿಕ ಮತ್ತು ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಭಕ್ತರ ಆರೋಗ್ಯದ ಕಡೆಗೂ ಗಮನಹರಿಸಬೇಕಾಗಿದೆ. ಮಠದಲ್ಲಿ ಆಯುರ್ವೇದಿಕ್ ಕೇಂದ್ರ ಸ್ಥಾಪನೆ ಮಾಡಿ ಜನರಿಗೆ ಆರೋಗ್ಯದ ಭಾಗ್ಯ ಕೊಡುವ ಕೆಲಸ ಕೂಡ ಮಠ ಮಾನ್ಯಗಳು ಮಾಡಬೇಕಾಗಿದೆ ಎಂದರು.
ಆಯುರ್ವೇದಿಕ್ ಚಿಕಿತ್ಸೆ ಪರಿಣಾಮ ಬೀರುವಲ್ಲಿ ಸ್ವಲ್ಪ ತಡವಾದರೂ ಕೂಡ ಒಳ್ಳೆಯ ಫಲಿತಾಂಶ ಕೊಡುತ್ತದೆ. ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ಒಂದು ವ್ಯಾಪಾರವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆ ದೃಷ್ಟಿಯಿಂದ ಮಠಮಾನ್ಯಗಳು ಆಯುರ್ವೇದಿಕ್ ಚಿಕಿತ್ಸಾ ಕೇಂದ್ರದ ಕಡೆಗೆ ಗಮನಹರಿಸಿ ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಪಿಐ ಸಿದ್ದರಾಮ್ ಗಡಾದ್ ಅವರು ಶ್ರೀಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪಾಳಾ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು, ಸೇಡಂ ಮಠದ ಶಿವಶಂಕರ್ ಶಿವಾಚಾರ್ಯರು, ಬಡದಾಳದ ಅಭಿನವ ಚನ್ನಮಲ್ಲೇಶ್ವರ್ ಶಿವಾಚಾರ್ಯರು, ಕಡಕೋಳ್ ಸಂಸ್ಥಾನ ಮಠದ ರುದ್ರಮುನಿ ಶಿವಾಚಾರ್ಯರಿಗೆ ಭಕ್ತಿ ಪೂರ್ವಕ ಗೌರವವನ್ನು ಸಲ್ಲಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿಣಿ ಸದಸ್ಯರು ಹಾಗೂ ಯುವ ಘಟಕದ ಜಿಲ್ಲಾ ಗೌರವಾಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್, ಮಹಾಸಭಾ ಉಪಾಧ್ಯಕ್ಷ ರಾಜುಗೌಡ ನಾಗನಳ್ಳಿ, ಕಾರ್ಯದರ್ಶಿ ಶೀಲಾ ಮುತ್ತಿನ್, ನಗರ ಯುವ ಜಿಲ್ಲಾಧ್ಯಕ್ಷ ಉದಯ್ ಪಾಟೀಲ್, ಕಾರ್ಯಕಾರಿಣಿ ಸದಸ್ಯರಾದ ಶಾರದಾ ವಿ. ಪಾಟೀಲ್, ವಿ.ಸಿ. ಪಾಟೀಲ್, ಸದಸ್ಯರಾದ ಮಹೇಶ್ವರಿ ವಾಲಿ, ತಾತಗೌಡ ಪಾಟೀಲ್, ಮಾಲಾ ದನ್ನೂರ್, ವೀರೇಂದ್ರ ಮಂಠಾಳೆ ಮುಂತಾದವರು ಉಪಸ್ಥಿತರಿದ್ದರು.