ಸಂಕಷ್ಟದಲ್ಲಿರುವ ತೋಟಗಾರಿಕೆ ಬೆಳೆಗಾರರಿಗೆ 25ಸಾವಿರ ಪರಿಹಾರ ನೀಡಲು ಆಗ್ರಹ

ಕುರುಗೋಡು.ಏ.19 ಕೋವಿಡ್19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ತೋಟಗಾರಿಕೆ ಬೆಳೆಗಾರರಿಗೆ ರೂ.25 ಸಾವಿರಗಳನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿ ತೋಟಗಾರಿಕೆ ಬೆಳೆಗಾರ ಒಕ್ಕೂಟ ಹಾಗು ಪ್ರಾಂತರೈತ ಸಂಘದ ಸಂಯುಕ್ತಾಶ್ರಯದಲ್ಲಿ ಕುರುಗೋಡು ತಹಶೀಲ್ದಾರರಿಗೆ ಮನವಿಸಲ್ಲಿಸಿದರು.
ಪ್ರಾಂತರೈತಸಂಘದ ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ ಮಾತನಾಡಿ, ಕುರುಗೋಡು ಪ್ರದೇಶದ ಸಾವಿರಾರುಎಕರೆ ಪ್ರದೇಶದಲ್ಲಿ ಅಂಜೂರ, ಪಪ್ಪಾಯಿ, ದಾಳಿಂಬೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಬೆಳೆದ ಹಣ್ಣುಗಳನ್ನು ಹೊರರಾಜ್ಯಗಳಿಗೆ ಮಾರಾಟ ಮಾಡುವುದಕ್ಕೆ ಸರ್ಕಾರ ಅನುಮತಿನೀಡುತ್ತಿಲ್ಲ. ಇದರಿಂದ ಬೆಳೆದ ಹಣ್ಣುಗಳು ಗಿಡಗಳಲ್ಲೇ ಹಣ್ಣಾಗಿ, ಕೊಳೆತುಹೋಗುತ್ತಿವೆ.ಇದರಿಂದಾಗಿ ರೈತರಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದವ್ಯಕ್ತಪಡಿಸಿದರು. ಈಗಾಗಲೇ ಪ್ರತಿ ಎಕರೆಗೆ 2ಲಕ್ಷಮೇಲ್ಪಟ್ಟು ರೈತರು ಖರ್ಚುಮಾಡಿದ್ದಾರೆ, ಜಿಲ್ಲಾ ಖನಿಜನಿಧಿಯಿಂದ ಸರ್ಕಾರ ಖರೀದಿಮಾಡುವ ವ್ಯವಸ್ತೆ ಮಾಡಬೇಕು. ಇಲ್ಲದಿದ್ದರೆ ತೋಟಗಾರ ಬೆಳೆಗಾರರಿಗೆ ಪ್ರತಿ ಎಕರೆಗೆ ರೂ. 25 ಸಾವಿರಗಳನ್ನು ಪರಿಹಾರಧನವನ್ನಾಗಿ ನೀಡಿ ತೋಟಗಾರಿಕೆ ಬೆಳೆಗಾರರಿಗೆ ಆಸರೆಯಾಗಬೇಕೆಂದು ಕಂದಾಯ ಅಧಿಕಾರಿ ಬಸಲಿಂಗಪ್ಪ ನವರಿಗೆ ಮನವಿಸಲ್ಲಿಸಿದರು.
ಪ್ರಾಂತರೈತಸಂಘದ ಮುಖಂಡ ಹೆಚ್.ಎಂ.ವಿಶ್ವನಾಥಸ್ವಾಮಿ, ಎನ್.ಸೋಮಪ್ಪ, ಹುಲೆಪ್ಪ, ತೋಟಗಾರಕೆ ಬೆಳೆಗಾರರ ಒಕ್ಕೂಟದ ಮುಖಂಡ ಆರ್.ಪ್ರಭುಶೇಖರಗೌಡ, ಸೇರಿದಂತೆ ಇತರೆ ಮುಖಂಡರು ಇದ್ದರು. ದೂರದ ಪ್ರದೇಶಗಳಿಗೆ ಮಾರಾಟ ಮಾಡಲು ಆಗದೇ ರೈತರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ.