ಸಂಕಷ್ಟಗಳ ಸರಮಾಲೆ ಮಧ್ಯೆಯು ಅಭಿವೃದ್ಧಿಗೆ ಒತ್ತು

ದಾವಣಗೆರೆ,ಜ.07: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಸರ್ಕಾರ ಬಂದಾದ ಮೇಲೆ ಸಂಕಷ್ಟಗಳ ಸರಮಾಲೆ ಎದುರಾಗಿರುವ ಮಧ್ಯೆಯು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.ನಗರದ ಡಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಪ್ರವಾಹ ಎದುರಾಯಿತು. ಪ್ರವಾಹದಿಂದಾಗಿರುವ ನಷ್ಟವನ್ನು ಸರಿ ಪಡಿಸುತ್ತಿದ್ದಂತೆಯೇ ಕೊರೊನಾ ಸಂಕಷ್ಟ ಎದುರಾಯಿತು. ಇವುಗಳ ನಡುವೆಯು ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಪ್ರವಾಹದಿಂದ ಸಂಭವಿಸಿರುವ 25 ಸಾವಿರ ಕೋಟಿ ನಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ 560 ಕೋಟಿ ರೂ. ಎನ್‌ಡಿಆರ್‌ಎಫ್ ನಿಯಮಾವಳಿಗಳಂತೆ ಬಿಡುಗಡೆ ಮಾಡಿದ್ದು, 2ನೇ ಕಂತಿನಲ್ಲಿ ಇನ್ನೂ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದರು.ಲೋಕೋಪಯೋಗಿ ಇಲಾಖೆಯಲ್ಲಿ 960 ಖಾಲಿ ಹುದ್ದೆ ಇದ್ದು, ಎಲ್ಲಾ 8 ವಲಗಳ ಅಧಿಕಾರಿಗಳಿಗೂ ಆಯಾ ವಲಯದಲ್ಲಿ ನಿಯಮಾವಳಿ ಪ್ರಕಾರ 9 ತಿಂಗಳ ಅವಧಿಗೆ ಟರ್ನಿ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು. ಪ್ರವಾಹದಿಂದ ರಾಜ್ಯದಲ್ಲಿ ಹಾಳಾಗಿರುವ ರಸ್ತೆ, ಸೇತುವೆಗಳ ತಾತ್ಕಾಲಿಕ ದುರಸ್ತಿಗೆ ಈ ವರ್ಷ 600 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಕ್ಷಣವೇ ಕಾಮಗಾರಿ ಕೈಗೊಂಡು ಜೂನ್ 10 ಒಳಗೆ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ಬೇರೆ, ಬೇರೆ ಲೆಕ್ಕ ಶಿರ್ಷಿಕೆಯಡಿ ಕಳೆದ ವರ್ಷ 185 ಕೋಟಿ ಹಾಗೂ ಈ ವರ್ಷ 80 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ಎಸ್.ರಾಮಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣರೆಡ್ಡಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಜರಿದ್ದರು.