ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ತರಕಾರಿ ಕಿಟ್ ವಿತರಣೆ

ಮೈಸೂರು: ಜೂ.9: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ತರಕಾರಿ ಕಿಟ್ ವಿತರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ನರಸಿಂಹರಾಜ ಕ್ಷೇತ್ರದ ಬಿಜೆಪಿ ವತಿಯಿಂದ ನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತರಕಾರಿ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್ ಮಾತನಾಡಿ, ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ ಸಂಕಷ್ಟದಲ್ಲಿರುವ ಪೌರಕಾರ್ಮಿಕರು, ಬಡವರಿಗೆ ವಿತರಿಸಲಾಗುವುದು.
ಕಿಟ್ ನಲ್ಲಿ 8 ಕೆಜಿಯಷ್ಟು ತರಕಾರಿ ಇದೆ. ಟೋಮೊಟೋ, ಬೀಟ್ ರೋಟ್, ಕ್ಯಾರೆಟ್, ತೊಂಡೆಕಾಯಿ, ಕೋಸು, ಬದನೆಕಾಯಿ ತಲಾ 1 ಕೆಜಿ ಇದ್ದು, ಇದರ ಜೊತೆಗೆ ನಿಂಬೆಹಣ್ಣು, ಹಸಿಮೆಣ್ಣಸಿನ ಕಾಯಿ, ಶುಂಠಿಯನ್ನು ವಿತರಿಸಲಾಗುತ್ತಿದೆ. ಇಂದು ತರಕಾರಿ ವಿತರಿಸುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದ್ದು, 500 ಕ್ಕೂ ಹೆಚ್ಚು ಮಂದಿಗೆ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ಕೊರೊನಾ ಲಾಕ್ ಡೌನ್ ನಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರಿಗೆ ದಿನಸಿ ಕಿಟ್, ತರಕಾರಿ ಕಿಟ್ ವಿತರಿಸುವ ಕೆಲಸ ಮಾಡುವ ಮೂಲಕ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೆ, ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಸಹ ಮಾಡಿದ್ದಾರೆ. ಇವರ ಈ ಸೇವಾ ಕಾರ್ಯ ಹೀಗೆ ಮುಂದುವರಿಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪಾಲಿಕಾ ಸದಸ್ಯರಾದ ಅಶ್ವಿನಿ ಶರತ್, ಉದ್ಯಮಿ ವೆಂಕಟೇಶ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವೇಲು, ನಾಗರಾಜು, ಸುರೇಂದ್ರ, ಗಾಂಧಿನಗರದ ಯಜಮಾನ್ರು ಇತರರು ಉಪಸ್ಥಿತರಿದ್ದರು.