
ಕೆಂಭಾವಿ :ಮಾ.10:ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಗುರುವಾರ ಶಹಾಪೂರದಿಂದ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯ ಬಸ್ಸಿಗೆ ಪಟ್ಟಣದ ಸಂಜೀವನಗರ ವೃತ್ತದಲ್ಲಿ ಯುವ ಮುಖಂಡ ಅಮೀನರೆಡ್ಡಿ ಯಾಳಗಿ ಅವರ ಅಭಿಮಾನಿ ಬಳಗ ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಹೂಮಾಲೆ ಹಾಕಿ ಅದ್ದೂರಿ ಸ್ವಾಗತ ಕೋರಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮಾತನಾಡಿ, ಇದು ವಿಜಯ ಸಂಕಲ್ಪ ಯಾತ್ರೆ ಅಲ್ಲ ಇದು ಮತ್ತೊಮ್ಮೆ ಬಿಜೆಪಿ ವಿಜಯೋತ್ಸವ ಯಾತ್ರೆ ಎಂದು ಬಣ್ಣಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದು ಹೇಳಿದರು. ಶಾಸಕ ನರಸಿಂಹ ನಾಯಕ (ರಾಜುಗೌಡ), ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ಪಕ್ಷದ ಜಿಲ್ಲಾಧ್ಯಕ್ಷ ಶರಣಭೂಪಾಲ ರೆಡ್ಡಿ, ಅಮೀನರೆಡ್ಡಿ ಪಾಟೀಲ ಯಾಳಗಿ, ಡಾ. ಚಂದ್ರಶೇಖರ ಸುಬೇದಾರ,ರಾಜುಗೌಡ ಉಕಿನಾಳ,ಬಸವರಾಜ ವಿಭೂತಿಹಳ್ಳಿ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸಂಗಣ್ಣ ತುಂಬಗಿ,ಶಂಕರ ಕರಣಗಿ,ಶ್ರೀನಿವಾಸರೆಡ್ಡಿ ಮಾಲಿಪಾಟೀಲ,ರಮೇಶ ಜಾಧವ ,ಸೇರಿದಂತೆ ಅನೇಕರಿದ್ದರು.
ಜನತೆಗೆ ನಿರಾಸೆ ತಂದ ಸಂಕಲ್ಪ ಯಾತ್ರೆ-ಬಿಜೆಪಿ ರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ ನಾಯಕರ ನೋಡಲು ಕಾತರರಾಗಿದ್ದ ಪಟ್ಟಣದ ಜನತೆಗೆ ಕ್ಷಣಿಕ ವಿಜಯ ಸಂಕಲ್ಪ ಯಾತ್ರೆ ನಿರಾಸೆ ಮೂಡಿಸಿತು. ಸ್ವಾಗತ ಸ್ಥಳದಲ್ಲೆ ಬಸ್ಸಿನಲ್ಲಿ ಕುಳಿತು ಕೇವಲ ಒಂದು ನಿಮಿಷ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿ. ಟಿ. ರವಿ ಹಾಗೂ ಜಗದೀಶ ಶೇಟ್ಟರ್ ನಂತರ ತಮ್ಮ ಕಾರುಗಳಲ್ಲಿ ಹುಣಸಗಿ ಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ಇದರಿಂದ ಕೆಲಕಾಲ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿತು.