ಷರತ್ತು ಬದ್ದ ಜಾಮೀನಿನ ಮೇಲೆ ಮುರುಘಾ ಶ್ರೀ ಬಿಡುಗಡೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ,ನ.16: ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕಳೆದ ಹದಿಮೂರು ತಿಂಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಮುರುಘಾಮಠದ ಶ್ರೀಶಿವಮೂರ್ತಿ ಮುರುಘಾ ಶರಣರು ಗುರುವಾರ ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಕಳೆದ 2022 ರ ಆಗಸ್ಟ್ 26 ರಂದು ಅಪ್ರಾಪ್ತ ಬಾಲಕಿಯರು ದೂರು‌ ನೀಡಿದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪ್ರಕರಣದಲ್ಲಿ ಜೈಲು ವಾಸಕ್ಕೆ ನ್ಯಾಯಾಲಯವು ಆದೇಶ ನೀಡಿತ್ತು, ಇದಾದ ಬಳಿಕಾ ಚಿತ್ರದುರ್ಗ ಎರಡನೇ ಅಪರ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ‌ಕ್ಕೆ ಶರಣರ ಪರ ವಕೀಲರು ಸಲ್ಲಿಸಿದ್ದ ‌ಜಾಮೀನು‌ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಅದಿನಿಂದ ಹದಿಮೂರು ತಿಂಗಳು, ಹದಿನೈದು ದಿನಗಳಿಂದ ಕಾರಾಗೃಹದಲ್ಲಿ ಬಂಧಿಯಾಗಿ ಸೆರೆ ಮನೆ ವನವಾಸವನ್ನು ಅನುಭವಿಸುತ್ತಿದ್ದರು. ಶರಣರ ಪರ ವಕೀಲರು ಜಾಮೀನು ಮಂಜೂರು ಮಾಡುವಂತೆ ಹೈಕೋರ್ಟ್ ಮೆಟ್ಟಿಲೆರಿದ್ದು, ನವೆಂಬರ್‌ ಎಂಟರಂದು‌‌ ಹೈಕೋರ್ಟ್ ಷರತ್ತು ಬದ್ದ ಜಾಮೀನು‌ ನೀಡಿತ್ತು. ಆ ಆದೇಶದಂತೆ ಬುಧವಾರ ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕಾ ನ್ಯಾಯಾಧೀಶರು ಜಾಮೀನು ದಾಖಲೆಗಳನ್ನು ಪರಿಶೀಲಿಸಿ ಷರತ್ತು ಬದ್ದ ಜಾಮೀನು‌ ಮೇಲೆ ಬಿಡುಗಡೆ ಮಾಡಿದ್ದರು. ಆದರೆ ನ್ಯಾಯಾಲಯದ ಬಿಡುಗಡೆ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ನಿನ್ನೆ ದಿನ ಸಿಗುವುದು ವಿಳಂಬ ಆದ ಕಾರಣ ಇಂದು ಮುರುಘಾ ಶರಣರಿಗೆ ಬಿಡುಗಡೆ ಭಾಗ್ಯ ದೊರೆಯಿತು. ಮಧ್ಯಾಹ್ನ 12.45 ರ ಸುಮಾರಿಗೆ ಮುರುಘಾ ಶರಣರು ಜೈಲಿನಿಂದ ಹೊರಬಂದರು. ಇದರಿಂದಾಗಿ ಮುರುಘಾ ಶರಣರು ಸದ್ಯಕ್ಕೆ ನಿರಾಳರಾಗಿದ್ದು,  2ನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಡಿ ವಾರೆಂಟ್ ನಿಂದ ನ್ಯಾಯಾಂಗ ಬಂಧನ ವಿಸ್ತರಿಸುವ‌ ಬಗ್ಗೆ ಬಾಲಕಿಯರ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಇಂದು ವಿಚಾರಣೆ ನಡೆಯುತ್ತಿದ್ದು, ನ್ಯಾಯಾಧೀಶರ ಮುಂದಿನ ಆದೇಶದ ಮೇಲೆ ಮುರುಘಾ ಶರಣರಿಗೆ ಬಿಡುಗಡೆಯೋ?, ನ್ಯಾಯಾಂಗ ಬಂಧನ ವಿಸ್ತರಣೆಯೋ? ಎಂಬುದು ತಿಳಿಯಲಿದೆ.ಮಧ್ಯಾಹ್ನ 12.45 ರ ಸುಮಾರಿಗೆ ಶರಣರು‌ ಜೈಲಿನಿಂದ ಬಿಡುಗಡೆಯಾದ ಬಳಿಕಾ ಸ್ನೇಹಿತರು ಬೆಂಬಲಿಗರು ಶರಣರನ್ನು ಕಾರಿನಲ್ಲಿ ದಾವಣಗೆರೆಗೆ‌ ಕರೆದು ಕೊಂಡು ಹೋದರು. ದಾವಣಗೆರೆಯ ವಿರಕ್ತಮಠ ಅಥವಾ ಸ್ನೇಹಿತ‌ ಜಯಕುಮಾರ್‌ ನಿವಾಸದಲ್ಲಿ ಮುರುಘಾ ಶರಣರು ತಂಗುವ‌ ಸಾಧ್ಯತೆ ‌ಇದೆ.