ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆಗಳ ಜಾರಿಗೆ ಆಗ್ರಹ: ಬೊಮ್ಮನಳ್ಳಿ

ಕಲಬುರಗಿ:ಮೇ.26: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಇದೀಗ ಷರತ್ತು , ನಿಯಮಗಳನ್ನು ಹೇರುವ ಮೂಲಕ ಮತದಾರರಿಗೆ ದ್ರೋಹವೆಸಗಿದೆ ಎಂದು ಮಾದಾರ ಚನ್ನಯ್ಯ ಜನ ಜಾಗೃತಿ ಸಮಿತಿಯ ಜಿಲ್ಲಾದ್ಯಕ್ಷ ಗಿರೀಶ ಬೊಮ್ಮನಳ್ಳಿ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಚುನಾವಣಾ ಸಂದರ್ಭದಲ್ಲಿ ರಾಜ್ಯದ ಮತದಾರರಿಗೆ ಅಂಗೈಯಲ್ಲಿ ಆಕಾಶ ತೋರಿಸುತ್ತಾ, ಅನೇಕ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತುಗಳಿಲ್ಲದೇ ನೀಡುವ ವಾಗ್ದಾನ ಮಾಡಿತ್ತು.ಅಧಿಕಾರಕ್ಕೆ ಏರುತ್ತಿದ್ದಂತೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಸೀಮಿತಗೊಳಿಸಲು ಮುಂದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚುನಾವಣೆ ವೇಳೆ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೂ ಪ್ರೀ,ನಿಮಗೂ ಪ್ರೀ ಎಂದು ಹೇಳಿ ಈಗ ಎಲ್ಲಾ ಗ್ಯಾರಂಟಿಗಳಿಗೂ ಷರತ್ತು ಹಾಗೂ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಇಡೀ ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಆಡಳಿತದಲ್ಲಿರುವ ಛತ್ತೀಸಗಡ್ ಹಾಗೂ ರಾಜಸ್ಥಾನಗಳಲ್ಲಿ ಘೋಷಿಸಿದ ಗ್ಯಾರಂಟಿಗಳಲ್ಲಿ ಯಾವುದನ್ನು ಅನುಷ್ಠಾನಗೊಳಿಸಿಲ್ಲ.200 ಯುನಿಟ್ ವಿದ್ಯುತ್ ಉಚಿತ, ನಿರುದ್ಯೋಗಿಗಳಿಗೆ ಮಾಸಾಶನ, ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರು.ಅದರೀಗ ಷರತ್ತುಗಳನ್ನು ಅನ್ವಯಿಸುವ ಮೂಲಕ ಮತದಾರರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ದೂರಿದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೂ ಬರುವ ಮುನ್ನ ಸಹಿ ಹಾಕಿದ ಗ್ಯಾರಂಟಿ ಕಾರ್ಡಗಳನ್ನು ಜನರಿಗೆ ವಿತರಿಸಿದ್ದಾರೆ. ಅದರಲ್ಲಿ ಯಾವುದೇ ಷರತ್ತುಗಳನ್ನೂ ಅಳವಡಿಸಿರಲಿಲ್ಲ. ಆದರೆ ಈಗ ಅಧಿಕಾರಕ್ಕೆ ಬಂದ ಮೇಲೆ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ.ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ತಡೆ ಹಿಡಿಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.ಇದೇ ಧೋರಣೆ ಮುಂದುವರೆದಲ್ಲಿ ಮುಂಬರುವ ದಿನಗಳಲ್ಲಿ ಮತದಾರರೊಡಗೂಡಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.