ವಿಶ್ವ ಅಂಗವಿಕಲರ ದಿನಾಚರಣೆ


ಅಂಗವಿಕಲರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ಅಂಗವಿಕಲರ ಬಗೆಗಿನ ತಾತ್ಸಾರ ಮನೋಭಾವವನ್ನು ತೊಡೆದು ಹಾಕಲು ಮತ್ತು ಅವರಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಸ್ವಾಭಿಮಾನದಿಂದ ಬಾಳಲು ಉತ್ತೇಜನ ನೀಡಲು ಇಂದು ವಿಶ್ವ ಅಂಗವಿಕಲರ ದಿನವನ್ನಾಗಿ ಆಚರಿಸಲಾಗುತ್ತದೆ.

ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ.

ಮೂಲತಃ ಈ ದಿನವನ್ನು ಆರಂಭಿಸಿದ್ದು ವಿಶ್ವಸಂಸ್ಥೆ. 1992 ರಲ್ಲಿ ಆರಂಭಿಸಲಾದ ಈ ದಿನಾಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಈ ದಿನದಂದು ಜಗತ್ತಿನಲ್ಲಿರುವ ಅನೇಕ ಅಂಗವಿಕಲ ಯಶೋಗಾಥೆಗಳನ್ನು ಅರುಹಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿವಿಧ ಥೀಮ್‌ಗಳಡಿಯಲ್ಲಿ ಆಚರಿಸಲಾಗುತ್ತದೆ. ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ವಿಶ್ವಸಂಸ್ಥೆಯ ಸೂಚನೆ ನಂತರ ರಾಷ್ಟ್ರದ ಬಹುತೇಕ ಸರ್ಕಾರಗಳು ವಿಕಲಚೇತನರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದವು. ಅದರಲ್ಲೂ ಇಂಗ್ಲೆಂಡ್ ನಲ್ಲಿ ಕಳೆದ 2012 ರಿಂದ ದೇಶದ ಎಲ್ಲ ವಿಕಲಚೇತನರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತು. ಆ ಮೂಲಕ ಅವರ ಜೀವನಸ್ತರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿತು. ವಿಶ್ವಸಂಸ್ಥೆಯ 27/2 ಕಲಂನ ಪ್ರಕಾರ ಕಡ್ಡಾಯ ಸರ್ಕಾರಿ ಉದ್ಯೋಗವು ವಿಕಲಚೇತನರ ಮೂಲಭೂತ ಹಕ್ಕು ಎಂದು ಹೇಳುತ್ತದೆ.

ವಿಕಲಚೇತನರಲ್ಲಿ ಜೀವನೋತ್ಸಾಹವನ್ನು ಬೆಳಸಲು ಎಲ್ಲರೂ ಕೈ ಜೋಡಿಸಬೇಕಿದೆ. ಇದು ಕೇವಲ ಭಾರತವಷ್ಟೇ ಅಲ್ಲ. ಇಡೀ ವಿಶ್ವವೇ ವಿಕಲಚೇತರನ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ, ಕಾನೂನುಗಳನ್ನು ಜಾರಿಗೊಳಿಸಿದೆ. ವಿಕಲಚೇತರನ ದಿನವನ್ನು ಆಚರಿಸುತ್ತಿರುವ ಉದ್ದೇಶ ಎಲ್ಲರಿಗೂ ತಲುಪಬೇಕಿದೆ