ಶ್ವೇತಭವನದ ಬೇಲಿ ದಾಟಿದ ಮಗು

ವಾಷಿಂಗ್ಟನ್, ಏ.೨೦- ಜಾಗತಿಕ ಮಟ್ಟದಲ್ಲಿ ಅತ್ಯಂತ ಕಠಿಣ ಭದ್ರತೆಯ ಪ್ರದೇಶಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಅಮೆರಿಕಾದ ಶ್ವೇತಭವನದಲ್ಲಿ ನಿನ್ನೆ ಅಚಾತುರ್ಯವೊಂದು ಸಂಭವಿಸಿದೆ. ಬಿಗಿಭದ್ರತೆಯ ಶ್ವೇತಭವನದ ಬೇಲಿಯ ಒಳನುಸುಳಿ ಮಗುವೊಂದು ಅಚಾನಕ್ ಆಗಿ ಪ್ರವೇಶಿಸಿದ ಘಟನೆ ನಡೆದಿದೆ.
ಶ್ವೇತಭವನದ ಸುತ್ತಲಿನ ಕಬ್ಬಿಣದ ಬೇಲಿಯನ್ನು ದಾಟಿ ಮಗು ಒಳಪ್ರವೇಶಿಸಿದೆ. ಅಮೆರಿಕ ಅಧ್ಯಕ್ಷರ ಸರಕಾರಿ ನಿವಾಸವಾಗಿರುವ ಶ್ವೇತಭವನದ ಉತ್ತರದ ದಿಕ್ಕಿನಲ್ಲಿರುವ ಕಬ್ಬಿಣದ ತಡೆಬೇಲಿಯ ಎಡೆಯಿಂದ ಮಗುವೊಂದು ಒಳನುಸುಳಿ ಬಂದಿದೆ. ತಕ್ಷಣ ಭದ್ರತಾ ಸಿಬಂದಿ ಮಗುವನ್ನು ಹೊರಗೆತ್ತಿಕೊಂಡು ಹೋಗಿ ಅದರ ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಶ್ವೇತಭವನದ ಗುಪ್ತಚರ ವಿಭಾಗದ ಮುಖ್ಯಸ್ಥ ಆಂಥೊನಿ ಗ್ಯುಗ್ಲಿಯೆಮಿಯನ್ನು ಉಲ್ಲೇಖಿಸಿದ ಸಿಎನ್‌ಎನ್ ವರದಿ ಹೇಳಿದೆ. ಇನ್ನು ಘಟನೆ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಶ್ವೇತಭವನಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ಘಟನೆ ವೇಳೆ ಅಧ್ಯಕ್ಷ ಜೋ ಬೈಡೆನ್ ಅವರು ಶ್ವೇತಭವನದ ಒಳಗೆ ಇದ್ದರು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಮಗುವನ್ನು ಹಸ್ತಾಂತರಿಸುವ ಮುನ್ನ ಭದ್ರತಾ ಅಧಿಕಾರಿಗಳು ಪೋಷಕರನ್ನು ಸಂಕ್ಷಿಪ್ತವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.