ಶ್ವೇತಭವನದ ದೀಪಾವಳಿ ಆಹ್ವಾನ ತಿರಸ್ಕಾರ

ನ್ಯೂಯಾರ್ಕ್, ನ.೮- ಗಾಜಾದ ಮೇಲಿನ ದಾಳಿಯಲ್ಲಿ ಇಸ್ರೇಲ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವ ಅಮೆರಿಕಾ ನಡೆಯನ್ನು ಖಂಡಿಸಿ, ಶ್ವೇತಭವನದಲ್ಲಿ ಆಯೋಜಿಸಲಾಗಿರುವ
ದೀಪಾವಳಿ ಆಚರಣೆಯ ಆಹ್ವಾನವನ್ನು ಭಾರತೀಯ ಮೂಲದ ಕೆನಡಾದ ಕವಯಿತ್ರಿ ರೂಪಿ ಕೌರ್ ಅವರು ತಿರಸ್ಕರಿಸಿದ್ದಾರೆ. ನವೆಂಬರ್ ೮ರಂದು ಶ್ವೇತಭವನದಲ್ಲಿ ದೀಪಾವಳಿ ಆಚರಣೆ ಆಯೋಜಿಸಲಾಗಿದೆ.
ನಾಗರಿಕರ ಸಾಮೂಹಿಕ ಶಿಕ್ಷೆಯನ್ನು ಬೆಂಬಲಿಸುವ ಸಂಸ್ಥೆಯಿಂದ ಬಂದಿರುವ ಯಾವುದೇ ಆಹ್ವಾನವನ್ನು ನಾನು ತಿರಸ್ಕರಿಸುತ್ತೇನೆ. ದೀಪಾವಳಿ ಎಂಬುದು ಸುಳ್ಳಿನ ಮೇಲೆ ಸದಾಚಾರದ ಹಾಗೂ ಅಜ್ಞಾನದ ಮೇಲಿನ ಜ್ಞಾನದ ಗೆಲುವಾಗಿದೆ. ಆದರೆ ಬೈಡೆನ್ ಆಡಳಿತವು ಶ್ವೇತಭವನದಲ್ಲಿ ದೀಪಾವಳಿ ಆಯೋಜಿಸುತ್ತಿರುವುದು ಅಚ್ಚರಿ ತಂದಿದೆ. ಯುಎಸ್ ಸರ್ಕಾರವು ಪ್ಯಾಲೆಸ್ತೇನ್ ಮೇಲಿನ ನರಮೇಧವನ್ನು ಸಮರ್ಥಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಅದೂ ಅಲ್ಲದೆ ಅಮೆರಿಕಾ ಸರ್ಕಾರವನ್ನು ಯುದ್ದದ ಹೊಣೆಗಾರರನ್ನಾಗಿ ಮಾಡಲು ಕೌರ್ ಅವರು ಇತರೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಇನ್ನು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಶ್ವೇತಭವನದಲ್ಲಿ ದೀಪಾವಳಿ ಹಬ್ಬವನ್ನು ಆಯೋಜಿಸುತ್ತಿದ್ದು, ಅವರು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.