ಶ್ವೇತಪತ್ರ ಕೇಳುವ ವ್ಯಕ್ತಿಗೆ ಅರ್ಹತೆ ಬೇಕು: ಅಶ್ವಿನ್‍ಕುಮಾರ್ ಕಿಡಿ

ತಿ.ನರಸೀಪುರ: ಫೆ.25:- ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಅನುದಾನಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಅನಾಮಧೇಯ ವ್ಯಕ್ತಿಯೊಬ್ಬ ಬೇಡಿಕೆ ಇಡುತ್ತಿರುವುದು ಹಾಸ್ಯಾಸ್ಪದ. ಶ್ವೇತಪತ್ರ ಕೇಳುವ ವ್ಯಕ್ತಿಯು ಕ್ಷೇತ್ರದಲ್ಲಿ ತನ್ನ ಸ್ಥಾನಮಾನದ ಬಗ್ಗೆ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಕಿಡಿಕಾರಿದರು.
ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ವಿವಿಧ ಪಕ್ಷದ ಮುಖಂಡರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ, ನನ್ನ ತಂದೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪೂರ ಹರಿಸಿಬಿಟ್ಟಿದ್ದಾರೆ ಎಂದು ಸದಾ ಮಾತನಾಡುವ ಅನಾಮಧೇಯ ವ್ಯಕ್ತಿಯು ಕಳೆದ ಬಾರಿ ತಾವು ಸೋಲಲು ಕಾರಣ ಏನೆಂಬುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ಮತ್ತು ಜನತೆಗೆ ತೃಪ್ತಿ ಇದೆ, ನನ್ನ ಕಾರ್ಯಕ್ಷಮತೆಯನ್ನು ಬೇರೆ ವ್ಯಕ್ತಿಗಳ ಮುಂದೆ ಸಾಬೀತುಪಡಿಸುವ ಅಗತ್ಯತೆ ಇಲ್ಲ ಎಂದರು.
ಕ್ಷೇತ್ರದಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡುವಂತೆ ನಮ್ಮ ಕಾರ್ಯಕರ್ತರು ನನಗೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣ ತೋರಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಶಿಕ್ಷಣ ,ಅರೋಗ್ಯ, ವಸತಿ, ಉದ್ಯೋಗ ಮತ್ತು ರೈತರ ಸಬಲೀಕರಣದಂತಹ ದೂರದೃಷ್ಟಿಯ ‘ಪಂಚರತ್ನ ಯೋಜನೆ’ಯು ರಾಜ್ಯಕ್ಕೆ ವರದಾನವಾಗಲಿದೆ. ಹಾಗಾಗಿ ಅವರ ಕಾರ್ಯವೈಖರಿ ಮತ್ತು ಜನಪರ ಕಾಳಜಿಯನ್ನು ಮೆಚ್ಚಿ ವಿವಿಧ ಪಕ್ಷದ ಮುಖಂಡರು ರಾಜ್ಯದಾದ್ಯಂತ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.ಇದರಿಂದ ಪಕ್ಷದ ಬಲವರ್ಧನೆಗೊಳ್ಳಲಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಉಕ್ಕಲಗೆರೆ ಗ್ರಾ.ಪಂ.ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಟಾಕಿ ಕುಮಾರ್ ಮಾತನಾಡಿ ,ಶಾಸಕರ ಕಾರ್ಯವೈಖರಿ, ಸನ್ನಡತೆ,ದೂರದೃಷ್ಟಿ,ಇಚ್ಛಾಶಕ್ತಿಯನ್ನು ಒಪ್ಪಿ ವಿವಿಧ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ.ಅಲ್ಲದೆ ಮಹಿಳೆಯರು ಸ್ವಯಂಪ್ರೇರಿತರಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಶಾಸಕರ ಜನಪ್ರಿಯತೆ ಮತ್ತು ಸರಳತೆಗೆ ಹಿಡಿದ ಕನ್ನಡಿ ಎಂದರು.
ಹೊಸದಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ನಾಗೇಶ್ ಮಾತನಾಡಿ,ಕ್ಷೇತ್ರದ ಶಾಸಕರ ಸರಳ ಸಜ್ಜನಿಕೆ ಮತ್ತು ಕಾರ್ಯವೈಖರಿಗೆ ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ.ಜೆಡಿಎಸ್ ಪಕ್ಷವನ್ನು
ಕ್ಷೇತ್ರದಲ್ಲಿ ಗೆಲ್ಲಿಸುವುದು ನಮ್ಮ ಪ್ರಥಮ ಆದ್ಯತೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸದಸ್ಯ ಜಯಪಾಲ್ ಭರಣಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಿಬಿಹುಂಡಿ ಚಿನ್ನಸ್ವಾಮಿ, ಜೆಡಿಎಸ್ ಮುಖಂಡ ಸಂಪತ್ ಕುಮಾರ್, ನೀಲಸೋಗೆ ಮಹೇಶ, ಹಿರಿಯೂರು ಸೋಮಣ್ಣ ,ಶಂಭುದೇವನಪುರ ರಮೇಶ್, ಸೋಸಲೆ ರಾಜಣ್ಣ ,ಮಲಿಯೂರು ಶಂಕರ, ತಲಕಾಡು ಮಾದೇಶ, ಸುರೇಶ. ರಾಜೇಶ, ಹೊಸಸಪುರ ಸಿದ್ದಣ್ಣ, ಸಿಬಿಹುಂಡಿ ಸಿದ್ದರಾಜು, ನೀಲಸೋಗೆ ಮನು ,ರಾಜು, ರಾಚಪ್ಪಾಜಿ, ಕಿಟ್ಟು ,ಅಶೋಕ, ಗೋವಿಂದ ಇತರರು ಹಾಜರಿದ್ದರು.