ಶ್ವಾಸಕೋಶ ಕ್ಯಾನ್ಸರ್‌ಗೆ ಹಲವು ಚಿಕಿತ್ಸೆ

ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಎರಡು ದಶಕಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್ ನ ಪತ್ತೆ ಮ್ರುತ್ಯುವಿಗೆ ಸಮನಾಗಿತ್ತಾದರೂ ಇತ್ತೀಚಿನ ದಿನಗಳಲ್ಲಿ ಇದರ ಚಿಕಿತ್ಸಾ ಶಸ್ತ್ರಾಗಾರಕ್ಕೆ ಅನೇಕ ಹೊಸ ಅವಿಷ್ಕಾರಗಳ ಸೇರ್ಪಡೆಯಾಗಿ ರೋಗಿಗಳ ಬದುಕುಳಿಯುವಿಕೆಯ ಸಮಯ ದೀರ್ಘಗೊಂಡಿದೆ.
ಶ್ವಾಸಕೋಶದ ಕ್ಯಾನ್ಸರ್ ಗೆ ಇಂದಿಗೂ ತಂಬಾಕು ಸೇವನೆ ಪ್ರಮುಖ ಕಾರಣವಾಗಿದೆ. ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ನ ಪತ್ತೆ ಸಾಮಾನ್ಯ ಜನರಿಗಿಂತ ದುಪ್ಪಟ್ಟಿನಷ್ಟು ಅಧಿಕವಾಗಿದೆ. ಸಂಶೋಧನೆಗಳ ಪ್ರಕಾರ ರಿಲೇಟಿವ್ ರಿಸ್ಕ್ (ಕ್ಯಾನ್ಸರ್ ನ ಪತ್ತೆ ಸಾಮಾನ್ಯ ಜನರಿಗಿಂತ ಎಷ್ಟು ಪಟ್ಟು ಅಧಿಕ ಎಂದು ತಿಳಿಸುವ ಮಾಪನ ಸಂಖ್ಯೆ) ಬೀಡಿ ವ್ಯಸನಿಗಳಲ್ಲಿ ೨.೬೪, ಸಿಗರೆಟ್ ವ್ಯಸನಿಗಳಲ್ಲಿ ೨.೨೩, ಒಟ್ಟಾರೆ ತಂಬಾಕು ಸೇವಕರಲ್ಲಿ ೨.೪೫ ಹಾಗೂ ನಿಷ್ಕ್ರಿಯ ಧೂಮಪಾನಿಗಳಲ್ಲಿ ೧.೨ ರಿಂದ ೧.೪೮ ರಷ್ಟಿದೆ. ಅಸ್ಬೆಸ್ಟೋಸ್ ಹಾಗೂ ರೇಡಾನ್ ನಂತಹ ಧೂಳನ್ನೊಳಗೊಂಡ ಉದ್ಯಮಗಳು ಮತ್ತು ಕೌಟುಂಬಿಕ ಕ್ಯಾನ್ಸರ್ ಕಾಯಿಲೆಗಳು ಶ್ವಾಸಕೋಶದ ಕ್ಯಾನ್ಸರ್ ನ ಇತರೆ ಕಾರಣಗಳು.ವಯಸ್ಸಿನೊಂದಿಗೆ ಶ್ವಾಸಕೋಶದ ಕ್ಯಾನ್ಸರ್ ನ ಪತ್ತೆ ಹೆಚ್ಚಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ ೫೦ರ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಮಹಿಳೆಯರಿಗಿಂತ ಪುರುಷರಲ್ಲಿ ಇದರ ಪ್ರಮಾಣ ನಾಲ್ಕು ಪಟ್ಟು ಅಧಿಕವಾಗಿದೆ. ಕೆಮ್ಮು, ಪಕ್ಕೆಗಳಲ್ಲಿ ಅಥವಾ ಎದೆಯಲ್ಲಿ ನೋವು, ತೂಕ ಕಡಿಮೆಯಾಗುವಿಕೆ, ಉಸಿರಾಟದ ತೊಂದರೆ, ಸುಸ್ತು, ಧ್ವನಿ ಬದಲಾವಣೆ ಇವು ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳು. ಕೆಲವರಲ್ಲಿ ಒಣ ಕೆಮ್ಮು ಮತ್ತು ಕೆಲವರಲ್ಲಿ ರಕ್ತ ಮಿಶ್ರಿತ ಕಫದ ಕೆಮ್ಮು ಕಾಣಿಸಿಕೊಳ್ಳುತ್ತದೆ.
ಭಾರತದಂತಹ ಅಭಿವ್ರುದ್ಧಿ ಶೀಲ ದೇಶಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಸ್ಕ್ರೀನಿಂಗ್ ಉಪಕ್ರಮಗಳು ಪ್ರಯೋಜನಕಾರಿ ಆಗದಿರುವುದರಿಂದಲೂ, ಟಿಬಿ ಯಂತಹ (ಕ್ಷಯ) ಸಾಂಕ್ರಾಮಿಕ ಕಾಯಿಲೆಗಳ ಹಾವಳಿಯಿಂದ ಕ್ಯಾನ್ಸರ್ ರೋಗಪತ್ತೆ ತಡವಾಗುವುದರಿಂದಲೂ ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ಅಂತಿಮ ಹಂತಗಳಲ್ಲಿ (ಸ್ಟೇಜ್ ೩-೪) ಪತ್ತೆಯಾಗುತ್ತದೆ.

ರುವಿನ ಹಂತಗಳಲ್ಲಿ (ಸ್ಟೇಜ್ ೧-೨) ಶಸ್ತ್ರ ಚಿಕಿತ್ಸೆಯಿಂದ ಶ್ವಾಸಕೋಶದ ಕ್ಯಾನ್ಸರ್ ನ್ನು ಪೂತರ್‌ಯಾಗಿ ಗುಣಪಡಿಸಬಹುದಾಗಿದೆ. ಕೀಮೋಥೆರಪಿ ಹಾಗೂ ರೇಡಿಯೋಥೆರಪಿ (ವಿಕಿರಣ ಚಿಕಿತ್ಸೆ) ಗಳ ಮೂಲಕ ಮೂರನೇ ಹಂತವನ್ನು (ಸ್ಟೇಜ್ ೩) ನಿಯಂತ್ರಿಸಬಹುದಾಗಿದೆ. ಅರ್ಧಕ್ಕಿಂತಲೂ ಹೆಚ್ಚು ರೋಗಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇತರೆ ಅಂಗಗಳಿಗೆ ಹರಡಿದ ನಂತರವೇ (ಸ್ಟೇಜ್ ೪) ಪತ್ತೆಯಾಗುತ್ತದೆ. ಕೀಮೋಥೆರಪಿ, ಟಾಗರ್‌ಟೆಡ್ ಥೆರಪಿ (ಉದ್ದೇಶಿತ ಚಿಕಿತ್ಸೆ) ಹಾಗೂ ಇಮ್ಯುನೋಥೆರಪಿ (ಜೈವಿಕ ಚಿಕಿತ್ಸೆ) ನಾಲ್ಕನೇ ಹಂತದ ಕ್ಯಾನ್ಸರ್ ನ ಚಿಕಿತ್ಸಾ ಕ್ರಮಗಳಾಗಿವೆ. ಕೀಮೋಥೆರಪಿ ಮತ್ತು ಟಾಗರ್‌ಟೆಡ್ ಥೆರಪಿಗಳು (ಕೆಲವು) ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದರೂ ಇಮ್ಯುನೋಥೆರಪಿಯ ವೆಚ್ಚ ಲಕ್ಷಗಳಲ್ಲಿದ್ದು ಜನಸಾಮಾನ್ಯರಿಗೆ ಕೈಗೆಟುಕದ ಹುಳಿದ್ರಾಕ್ಷಿಯೇ ಆಗಿದೆ.ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವೆನ್ನುವುದು ಶ್ವಾಸಕೋಶದ ಕ್ಯಾನ್ಸರ್ ನ ಪ್ರಸ್ತುತ ಸ್ಥಿತಿಗೆ ಶತ ಪ್ರತಿ ಶತ ಒಪ್ಪುತ್ತದೆ. ಆದ್ದರಿಂದ ನಾವೆಲ್ಲರೂ ತಂಬಾಕು ತ್ಯಜಿಸಿ, ವ್ಯಸನಿಗಳನ್ನು ಧೂಮಪಾನ ತ್ಯಜಿಸಲು ಪ್ರೇರೇಪಿಸಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ.

ಡಾ. ಶ್ವೇತ ಎಸ್ (ನಿನುತ)
ಮೆಡಿಕಲ್ ಆಂಕಾಲಜಿಸ್ಟ್