ಶ್ರೇಷ್ಠ ಸರಕಾರವನ್ನು ಹೊಂದಿರುವ ದೇಶ ನಮ್ಮದು

ವಿಜಯಪುರ:ಮಾ.29: ಶ್ರೇಷ್ಠ ಸರಕಾರವನ್ನು ಹೊಂದಿರುವ ದೇಶ ನಮ್ಮದು, ಅಂತಹ ದೇಶದಲ್ಲಿ ಚುನಾವಣೆಯು ತುಂಬಾ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇದನ್ನು ಕೇಂದ್ರ ಸರಕಾರ ನಿರ್ವಹಿಸುತ್ತಿರುವುದು ನ್ಯಾಯ ಸಮ್ಮತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ ದಾನಮ್ಮನ್ನವರ ಹೇಳಿದರು.
ನÀಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಕೋಶ ಮತ್ತು ಜಿಲ್ಲಾ ಸ್ವೀಪ್ ಸಂಸ್ಥೆ, ಜಿಲ್ಲಾ ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಣಕು ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗುತ್ತಿರುವುದು ನಮ್ಮ ದೇಶದ ಹೆಮ್ಮೆ, ಚುನಾವಣೆ ಕೇವಲ ಮತವಾಗಿರಬಾರದು ಅದು ನಿಮ್ಮ ಹಕ್ಕು ಅದನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕಲಿಯಬೇಕಾಗಿರುವುದು ಅಗತ್ಯವಾಗಿದೆ ಎಂದರು.
ಚುನಾವಣೆಯ ತಿಳುವಳಿಕೆ ಮೂಡಿಸುವ ಸಲುವಾಗಿ ಸಾಕಷ್ಟು ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಜಾಗೃತಿಯನ್ನು ಹುಟ್ಟುಹಾಕುವ ಉದ್ದೇಶದಿಂದ ಮತದಾನ ಪ್ರತಿಯೊಬ್ಬರಿಗೂ ಎಷ್ಟು ಅಗತ್ಯವೆಂದು ಮತದಾನ ಹಕ್ಕಿನ ಕುರಿತು ತಿಳಿಸಿದರು.
ಪ್ರತಿವರ್ಷ ಅರ್ಹತಾ ದಿನದ ಮತದಾನದ ವಿವರಣೆಯನ್ನು ವಿವರಣಾತ್ಮಕವಾಗಿ ತಿಳಿಸುವ ಕೆಲಸವನ್ನು ಮಾಡಲಾಗುತ್ತದೆ. ಇತ್ತೀಚಿನ ಯುಗದಲ್ಲಿ ಎಲ್ಲವೂ ಡಿಜಿಟಲೀಕರಣವಾಗುತ್ತಿರುವುದರಿಂದ ಮತದಾನದ ವಿಷಯದಲ್ಲಿಯೂ ವಿಎಚ್ ಆಪ್ ಮೂಲಕ ಮನೆಯಲ್ಲಿಯೆ ಮತದಾರರ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬಹುದು, ಇದರ ಜೊತೆಗೆ ಮನೆಯಲ್ಲಿ ಕುಳಿತುಕೊಂಡು ತಿದ್ದುಪಡೆಯನ್ನು ಮಾಡಿಕೊಳ್ಳುವ ಅವಕಾಶವನ್ನು ಒದಗಿಸಿ ಕೊಟ್ಟಿದ್ದಾರೆ. ನಿಮ್ಮಲ್ಲಿ ಬದಲಾವಣೆಯಾದರೆ ಮನೆ ಸುತ್ತಮುತ್ತಲಿನಲ್ಲಿ ಬದಲಾವಣೆಯಾಗುತ್ತದೆ ಮತ್ತು ನೀವು ಮತ ಹಾಕುವುದನ್ನು ಮರೆಯದಿರಿ, ಬೇರೆಯವರಿಗೂ ಮತವನ್ನು ಹಾಕಲು ಉತ್ತೇಜಿಸಿ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಮತದಾನ ರಾಜಕೀಯವಲ್ಲ ಅದು ನಿಮ್ಮ ಅಮೂಲ್ಯವಾದ ಅವಕಾಶ, ರಾಜಕೀಯ ರಚನೆ, ಮತ್ತು ಚುನಾವಣೆಯ ರಚನೆಯ ಕುರಿತು ತಿಳುವಳಿಕೆಯನ್ನು ಹೊಂದಿದ ನಂತರ ಮತದಾನ ಮಾಡುವುದು ಅಗತ್ಯವಾಗಿದೆ. ಮತದಾನ ಹಾಕುವುದರ ಕುರಿತು, ಆಡಳಿತ ಸಂರಚನೆ ಕುರಿತು ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿದ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಮತದಾನ ನಾವೆಲ್ಲರು ಪಡೆದುಕೊಂಡು ಬಂದಿರುವ ಹಕ್ಕು, ಮತದಾರ ಗುರುತಿನ ಚೀಟಿಯನ್ನು ಹೊಂದುವುದು ಆದ್ಯ ಕರ್ತವ್ಯ. ಚುನಾವಣಾ ಪಟ್ಟಿ ಅದರ ಅಂಕಿ-ಅಂಶಗಳ ಅರಿವನ್ನು ಇಂದು ಸ್ವೀಪ್ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ. ಮತದಾನ ಮಾಡುವುದರ ಜೊತೆಗೆ ಅದರ ಮಹತ್ವವನ್ನು ಸಾರುವುದು ಅಷ್ಟೇ ಅಮೂಲ್ಯವಾದದ್ದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಣಕು ಸಂಸತ್‍ನ್ನು ವಿವಿಯ ವಿದ್ಯಾರ್ಥಿನಿಯರು ಮಾಡಿದರು ಹಾಗೂ ಜಿಲ್ಲಾ ಪಂಚಾಯತ ಸದಸ್ಯರುಗಳಿಂದ ವಿದ್ಯಾರ್ಥಿನಿಯರಿಗೆ ಬಿಯು, ಸಿಯು ಮತ್ತು ಇವಿಎಮ್ ಕುರಿತು ತರಬೇತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಪ್ರೊ.ಬಿ.ಎಸ್ ನಾವಿ, ಸಿಪಿಓ ಎನ್.ಕೆ.ಗೋಟೆ, ಜಿಲ್ಲಾ ಯುವಜನ ಸೇವಾ ಅಧಿಕಾರಿ ರಾಹುಲ್ ಡೋಂಗರೆ, ಇತಿಹಾಸ ವಿಭಾಗದ ಸಂಯೋಜಕಿ ಪ್ರೊ.ಲಕ್ಷ್ಮೀದೇವಿ ವೈ, ರಾಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ.ರಮೇಶ ಸೋನಕಾಂಬಳೆ, ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿಷ್ಣು ಶಿಂಧೆ, ವಿವಿಯ ಸ್ವೀಪ್ ನೋಡಲ್ ಅಧಿಕಾರಿ ಡಾ.ತಹಮೀನಾ ನಿಗಾರ್ ಸುಲ್ತಾನಾ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಪ್ರೊ.ಶಾಂತಾದೇವಿ ಟಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಲಕ್ಷ್ಮೀ ಬಾಗಲಕೋಟಿ ನಿರೂಪಿಸಿದರು.