ಶ್ರೇಷ್ಠ ಯತಿಸಂತ ಶರಣರು ಹಾನಗಲ್ ಕುಮಾರಸ್ವಾಮಿಗಳುಃ ಗಿರಿಜಾ ಪಾಟೀಲ

ವಿಜಯಪುರ, ಸೆ.6-ಅತ್ಯಂತ ಕಟ್ಟುನಿಟ್ಟಿನ ಬದುಕನ್ನು ಸವೆಸುತ್ತಾ ಸಮಾಜದಲ್ಲಿನ ಅಜ್ಞಾನ, ಅಂಧÀಕಾರ, ಅನಾಚಾರಗಳನ್ನು ಕಿತ್ತೊಗೆಯಲು ಜೋಳಿಗೆಯ ಧರಿಸಿ ನಿಂತ ಶ್ರೇಷ್ಠ ಯತಿಸಂತ ಶರಣರು ಶಿವಯೋಗ ಮಂದಿರದ ಹಾನಗಲ್ ಕುಮಾರಸ್ವಾಮಿಗಳು ಎಂದು ಬಸವನ ಬಾಗೇವಾಡಿಯ ಶಿಕ್ಷಕಿ ಗಿರಿಜಾ ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಅವರು ರವಿವಾರ ಸಂಜೆ ಬಂಜಾರಾ ಕ್ರಾಸ್ ಬಳಿಯ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇವರ ಆಶ್ರಯದ ಯುವಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 15ನೇಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಹಾನಗಲ್ ಕುಮಾರಸ್ವಾಮಿಗಳ ನಡೆನುಡಿಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡಿ, ನಮ್ಮ ಸೃಷ್ಠಿ ಸರಿಯಿದೆ. ಆದರೆ ನಮ್ಮ ದೃಷ್ಟಿಯಲ್ಲಿ ದೋಷವಿದೆ. ಹಾಗಾಗಿ ನಮ್ಮ ನೋಟಗಳು ಬದಲಾಗಬೇಕಿವೆ. ಆಯಾ ಸ್ಥಳಗಳಲ್ಲಿ ಹೋದಾಗ ಅಲ್ಲಿನ ಸ್ಥಳಗಳ ಪ್ರಭಾವದಂತೆಯೇ ನಮ್ಮ ಮನಸ್ಸಿನ ಮನೋಭಾವನೆಗಳು ಬದಲಾಗುವವು. ನಾವು ಉಣ್ಣುವ ಒಂದೊಂದು ತುತ್ತು ಕೂಡಾ ಆ ದೇವರ ತುತ್ತಾಗಿದೆ. ಅರಸನಿಲ್ಲದ ಅರಮನೆ, ಗುರುವಿಲ್ಲದ ಮಠ, ತಾಯಿಯಿಲ್ಲದ ಮನೆ ಇವೆಲ್ಲವುಗಳು ಶೂನ್ಯವೇ ಸರಿ ಎಂದು ಹೇಳುತ್ತಾ ಸಮಾಜೋದ್ಧಾರಕ್ಕಾಗಿ ಅವಿರತ ಶ್ರಮಿಸಿ ಲಕ್ಷಾಂತರ ಜನರಿಗೆ ಬೆಳಕಾದವರು ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು. ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತಿತರ ಪವಿತ್ರ ಹಾಗೂ ಸುಂದರ ಸ್ಥಳಗಳ ಮಧ್ಯೆ ನೆಲೆಗೊಂಡಿರುವ ಬಯಲು ಸೀಮೆಯ ಶಿವಯೋಗ ಮಂದಿರ ಸಾಕ್ಷಾತ್ ಸ್ವರ್ಗವೇ ಸರಿ ಎಂದು ನುಡಿದರು.

ಸಹಕಾರಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಬಿ.ಆರ್. ಬನಸೋಡೆ ಮಾತನಾಡಿ, ಸಯ್ಯಾಜಿರಾವ ಗಾಯಕವಾಡ, ಶಾಹು ಮಹಾರಾಜ ಹಾಗೂ ಮೈಸೂರು ಒಡೆಯರರು ಜಾತ್ಯಾತೀತ ಮನೋಭಾವ ಉಳ್ಳವರಾಗಿದ್ದರು. ತಮ್ಮ ಸುತ್ತಲೂ ಸುಭಿಕ್ಷ, ಸುಭದ್ರ ಮತ್ತು ಸೌಹಾರ್ದ ವಾತಾವರಣವನ್ನು ನಿರ್ಮಾಣ ಮಾಡುವುದಕೋಸ್ಕರವೇ ತಮ್ಮ ಜೀವನವನ್ನು ಸವೆಸಿದ ಮಹಾತ್ಮರವರು. ಈ ದಿಸೆಯಲ್ಲಿ ಹಾನಗಲ್ ಶ್ರೀಗಳದು ಕೂಡಾ ಅಪರೂಪದ ಕೊಡುಗೆ ಇದೆ. ಮಾದರಿ ವ್ಯಕ್ತಿತ್ವ ಅವರದ್ದಾಗಿತ್ತು. ಪೂಜ್ಯರ ಸ್ಮರಣೆ ನಮ್ಮ ಆತ್ಮಕ್ಕೆ ಒಂದು ಪವಿತ್ರವಾದ ಧ್ಯಾನವಾಗಿದೆ ಎಂದು ನುಡಿದರು.

ವೇದಿಕೆಯ ಮೇಲಿದ್ದ ಅಭಾವೀಮದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ, ಅಭಾವೀಮದ ನಿರ್ದೇಶಕಿ ಶಾರದಾ ಕೊಪ್ಪ, ಅಧ್ಯಕ್ಷತೆ ವಹಿಸಿದ್ದ ಡಾ. ಶಾರದಾ ಪಾಟೀಲ ಮಾತನಾಡಿದರು.

ಈ ಸಭೆಯಲ್ಲಿ ಬಿ.ಎಚ್. ಬಾದರಬಂಡಿ, ಕೆ.ಬಿ. ಅಣೆಪ್ಪನವರ, ಎಮ್.ಜಿ. ಯಾದವಾಡ, ವಂದನಾ ಲೋಣಿ, ಡಾ. ಬನುದೇವಿ ಸಂಕಣ್ಣವರ, ಶಿವಾನಂದ ಮಲಕಶೆಟ್ಟಿ, ಎಸ್.ವಾಯ್. ದೊಡ್ಡಮನಿ, ಡಾ. ವಿ.ಡಿ. ಐಹೊಳ್ಳಿ, ಶರಣಗೌಡ ಪಾಟೀಲ ಸೇರಿದಂತೆ ಮಹಾಸಭಾದ ಅನೇಕ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಮ್.ಎಮ್. ಅವರಾದಿ ನಿರೂಪಿಸಿದರು. ಭಾರತಿ ಭುಯ್ಯಾರ ಪ್ರಾರ್ಥಿಸಿದರು. ಎಸ್.ಜೆ. ನಾಡಗೌಡರ ಸ್ವಾಗತಿಸಿದರು. ರಾಜೇಂದ್ರಕುಮಾರ್ ಬಿರಾದಾರ್ ವಂದಿಸಿದರು.