ಶ್ರೇಷ್ಟ ವ್ಯಕ್ತಿತ್ವ ಮಾನವನ ದೊಡ್ಡ ಆಸ್ತಿ

ಕಲಬುರಗಿ:ಮೇ.26: ಅಹಂಕಾರ, ಕೋಪ, ಅಸೂಯೆ ರಹಿತ, ಜಾತಿ, ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಯ ಅಳವಡಿಕೆ, ಸದಾ ಪ್ರಜ್ಞಾಪೂರ್ವಕ ವರ್ತನೆ, ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕವಾದ ಚಿಂತನೆ, ಸಮಾಜ ಸೇವೆ ಅಂತಹ ಮುಂತಾದ ಗುಣಗಳು ಶ್ರೇಷ್ಟ ವ್ಯಕ್ತಿಯ ಲಕ್ಷಣಗಳಾಗಿದ್ದು, ಇವುಗಳು ಮಾನವನ ದೊಡ್ಡ ಆಸ್ತಿಯಾಗಿವೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

   ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ 'ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ'ದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಗುರುವಾರ ಸಂಜೆ ಜರುಗಿದ 'ವ್ಯಕ್ತಿತ್ವ ವಿಕಸನ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
  ವ್ಯಕ್ತಿಯು ತನ್ನ ಜೀವನದಲ್ಲಿ ಶ್ರೇಷ್ಟ ವ್ಯಕ್ತಿತ್ವವನ್ನು ಹೊಂದಿ, ಉನ್ನತವಾದ ಸಾಧನೆಯನ್ನು ಮಾಡಬೇಕಾದರೆ ನಿರಂತರವಾದ ಪ್ರಯತ್ನ ತುಂಬಾ ಅಗತ್ಯವಾಗಿದೆ. ಸೃಜನಶೀಲತೆ, ಸಮತೋಲನವಾದ ಆಹಾರ, ವ್ಯಾಯಾಮ,ಯೋಗ,ಧ್ಯಾನ,ಪ್ರಾರ್ಥನೆ, ಹೊಂದಾಣಿಕೆ ಸ್ವಭಾವ, ವಾಸ್ತವವಾದಿಯಾಗಿರುವದು, ನೈತಿಕ ಮೌಲ್ಯಗಳ ಅಳವಡಿಕೆ, ಟೆನ್ಷನ ಮುಕ್ತ ಜೀವನ, ಸದಾ ಉತ್ಸಾಹ, ಉತ್ತಮ ನಡವಳಿಕೆ, ಆತ್ಮ ವಿಶ್ವಾಸ, ಕೀಳರಿಮೆಯನ್ನು ತ್ಯಜಿಸುವದು ಸೇರಿದಂತೆ ಮುಂತಾದ ಗುಣಗಳನ್ನು ಅಳವಡಿಸಿಕೊಂಡು, ನಿಗದಿತ ಗುರಿ ಮತ್ತು ಶಿಸ್ತುಬದ್ಧವಾಗಿ ಪ್ರಯತ್ನಿಸಿದರೆ, ಜೀವನದಲ್ಲಿ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ. ಬುದ್ಧ, ಬಸವ, ಅಂಬೇಡ್ಕರ, ವಿವೇಕಾನಂದ, ಕಲಾಂರಂತಹ ಮುಂತಾದ ವ್ಯಕ್ತಿಗಳು ಮಾದರಿಯಾಗುತ್ತಾರೆ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ ಮಾತನಾಡಿ, ಉತ್ತಮ ವ್ಯಕ್ತಿತ್ವ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ. ಇಂತಹ ವ್ಯಕ್ತಿಗಳು ಸಮಾಜದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಶ್ರೇಷ್ಟ ವ್ಯಕ್ತಿಗಳ ಸಾಧನೆಯ ಬಗ್ಗೆ ತಿಳಿದುಕೊಂಡು, ತಮ್ಮ ಜೀವನದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಂಡರೆ ನೀವು ಕೂಡಾ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ನುಡಿದರು.

  ಸಂಸ್ಥೆಯ ಪ್ರಾಚಾರ್ಯ ಭೀಮಾಶಂಕರ ಎಸ್.ಘತ್ತರಗಿ, ಉಪನ್ಯಾಸಕರಾದ ವಿಶ್ವನಾಥ ಶೇಗಜಿ, ಅಶ್ವಿನಿ ಪಾಟೀಲ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಹಾಗೂ ವಿದ್ಯಾರ್ಥಿಗಳು, ಇನ್ನಿತರರಿದ್ದರು.