ಶ್ರೇಷ್ಟ ವ್ಯಕ್ತಿತ್ವವುಳ್ಳವರು ಸಮಾಜದ ದೊಡ್ಡ ಆಸ್ತಿ

ಕಲಬುರಗಿ.ಅ.18: ಅಹಂಕಾರ, ಕೋಪ, ಅಸೂಯೆ ರಹಿತ ಜೀವನ, ಜಾತಿ, ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಯ ಅಳವಡಿಕೆ, ಸದಾ ಪ್ರಜ್ಞಾಪೂರ್ವಕ ವರ್ತನೆ, ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕವಾದ ಚಿಂತನೆ, ಸಮಾಜ ಸೇವೆ ಅಂತಹ ಮುಂತಾದ ಗುಣಗಳು ಶ್ರೇಷ್ಟ ವ್ಯಕ್ತಿಯ ಲಕ್ಷಣಗಳಾಗಿದ್ದು, ಇವುಗಳು ಮಾನವನ ದೊಡ್ಡ ಆಸ್ತಿಯಾಗಿವೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮಪಟ್ಟರು.
ಕಾಳಗಿ ತಾಲೂಕಿನ ಹೆಬ್ಬಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಿಸಿಎಂ ಇಲಾಖೆಯ ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ತಾಲೂಕುಗಳ ವಸತಿ ನಿಲಯಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಜರುಗುತ್ತಿರುವ ದಸರಾ ರಜೆಯ ಬುನಾದಿ ತರಬೇತಿಯಲ್ಲಿ ಬುಧವಾರ ಜರುಗಿದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವ್ಯಕ್ತಿಯು ತನ್ನ ಜೀವನದಲ್ಲಿ ಶ್ರೇಷ್ಟ ವ್ಯಕ್ತಿತ್ವವನ್ನು ಹೊಂದಿ, ಉನ್ನತವಾದ ಸಾಧನೆಯನ್ನು ಮಾಡಬೇಕಾದರೆ ನಿರಂತರವಾದ ಪ್ರಯತ್ನ ತುಂಬಾ ಅಗತ್ಯವಾಗಿದೆ. ಸೃಜನಶೀಲತೆ, ಸಮತೋಲನವಾದ ಆಹಾರ, ವ್ಯಾಯಾಮ,ಯೋಗ,ಧ್ಯಾನ,ಪ್ರಾರ್ಥನೆ, ಹೊಂದಾಣಿಕೆ ಸ್ವಭಾವ, ವಾಸ್ತವವಾದಿಯಾಗಿರುವದು, ನೈತಿಕ ಮೌಲ್ಯಗಳ ಅಳವಡಿಕೆ, ಟೆನ್ಷನ ಮುಕ್ತ ಜೀವನ, ಸದಾ ಉತ್ಸಾಹ, ಉತ್ತಮ ನಡವಳಿಕೆ, ಆತ್ಮ ವಿಶ್ವಾಸ, ಕೀಳರಿಮೆಯನ್ನು ತ್ಯಜಿಸುವದು ಸೇರಿದಂತೆ ಮುಂತಾದ ಗುಣಗಳನ್ನು ಅಳವಡಿಸಿಕೊಂಡು, ನಿಗದಿತ ಗುರಿ ಮತ್ತು ಶಿಸ್ತುಬದ್ಧವಾಗಿ ಪ್ರಯತ್ನಿಸಿದರೆ, ಜೀವನದಲ್ಲಿ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ. ಬುದ್ಧ, ಬಸವ, ಅಂಬೇಡ್ಕರ, ವಿವೇಕಾನಂದ, ಕಲಾಂರಂತಹ ಮುಂತಾದ ವ್ಯಕ್ತಿಗಳು ಮಾದರಿಯಾಗುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪ್ರಾಚಾರ್ಯ ಶಿವರಾಮ ಚವ್ಹಾಣ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ದಸರಾ ಸಮಯದಲ್ಲಿ ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡಬಾರದು ಮತ್ತು ಹೆಚ್ಚಿನ ಕಲಿಕೆ, ವ್ಯಕ್ತಿತ್ವ ವಿಕಸನ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಉತ್ತಮವಾದ ಯೋಜನೆಯನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಕಲಬುರಗಿ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಪನ್ಮೂಲ ಶಿಕ್ಷಕರಾದ ಮಹಾದೇವಪ್ಪ ಎಚ್.ಬಿರಾದಾರ, ಪ್ರದೀಪಕುಮಾರ ಪವಾಡಿ, ಜ್ಯೋತಿ ಎಚ್.ಸಿ., ಅಶ್ವಿನಿ ಪಾಟೀಲ್, ಶಿವಾನಂದ ಬೀಳಗಿ, ಗಜಾನನ್, ಮಹಾಲಿಂಗ್, ಗೋಪಾಲ್, ಸಿದ್ದಲಿಂಗಪ್ಪ, ಆನಂದರಡ್ಡಿ, ಲೋಹಿತ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.