ಶ್ರೇಯಸ್ ಅಯ್ಯರ್ ಐಪಿಎಲ್‌ಗೆ ಅಲಭ್ಯ ಪಂತ್‌ಗೆ ನಾಯಕನ ಪಟ್ಟ


ನವದೆಹಲಿ,ಮಾ.೩೧- ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಶ್ರೇಯಸ್ ಏ. ೯ ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಬ್‌ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಸಾರಥ್ಯ ವಹಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಗಾಯದ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಬೇಗನೆ ಗುಣಮುಖರಾಗಿ ತಂಡಕ್ಕೆ ಮರಳಲಿ ಎಂದು ಆಶಿಸಿದೆ. ಇತ್ತೀಚೆಗಷ್ಟೆ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅವರ ಎಡಭುಜಕ್ಕೆ ಗಾಯವಾಗಿದೆ. ಗುಣಮುಖರಾಗಲು ಸಾಕಷ್ಟು ಕಾಲಾವಕಾಶ ಬೇಕಾಗಿದೆ. ಹೀಗಾಗಿ ೧೪ನೇ ಐಪಿಎಲ್ ಆವೃತ್ತಿಯಿಂದ ದೂರ ಉಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಯಕ ರಿಷಬ್‌ಪಂತ್ ದೆಹಲಿ ತಂಡವನ್ನು ಮುನ್ನಡೆಸುವುದು ತಮ್ಮ ಕನಸಾಗಿತ್ತು. ಅದು ಈಗ ಈಡೇರುತ್ತಿದೆ. ನಾಯಕನ ಸ್ಥಾನಕ್ಕೆ ತಾವು ಸಮರ್ಥ ಎಂದು ಪರಿಗಣಿಸಿ ಡೆಲ್ಲಿ ಕ್ಯಾಪಿಟಲ್ ಫ್ರಾಂಚೈಸಿ ತಂಡದ ಜವಾಬ್ದಾರಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.