ಶ್ರೇಯಸ್ಸಿಗೆ ಶರಣಬಸವರೇ ಕಾರಣ

ಕಲಬುರಗಿ:ಆ.1:ತಮ್ಮ ಮತ್ತು ತಮ್ಮ ಕುಟುಂಬ ಯಶಸ್ಸು ಹೊಂದಲು ಮಹಾದಾಸೋಹಿ ಶರಣಬಸವರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಇ.ಎಸ್.ಐ ಆಸ್ಪತ್ರೆ ವಿಮಾ ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮೀ ರಾಜೇಶ ಅವರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಶರಣಬಸವೇಶ್ವರ ಲೀಲೆಗಳು ಎಂಬ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ಉಪನ್ಯಾಸ ನೀಡಿದರು.

ತಮ್ಮ ತಾಯಿಗೆ ಹೆಣ್ಣುಮಕ್ಕಳೆ ಜನಿಸುತ್ತಿದ್ದಾಗ, ಗಂಡು ಮಗು ಬೇಕು ಎಂದು ಶರಣರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದಾಗ ಗಂಡು ಮಗುವನ್ನು ಶರಣಬಸವರು ದಯಪಾಲಿಸಿದ್ದಾರೆ. ಎಂ.ಬಿ.ಬಿ.ಎಸ್ ಪ್ರವೇಶ ಪಡೆಯಲು ಹಣದ ತೊಂದರೆ ಇದ್ದಾಗ ಸರ್ಕಾರ ಬರೀ ಸರ್ಕಾರಿ ಶುಲ್ಕವಷ್ಟೇ ತುಂಬಿ ಎಂಬ ಆದೇಶ ಹೊರಡಿಸಿತು. ಮಗನಿಗೆ ಎಂ.ಬಿ.ಬಿ.ಎಸ್ ಪ್ರವೇಶ ಕೊಡಿಸಲು ಅಸಾಧ್ಯವಾದಾಗ ಶರಣರ ದಯೆಯಿಂದ ಬೆಂಗಳೂರಿನಲ್ಲಿ ಅಂಬೇಡ್ಕರ ಮೇಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ತಮ್ಮ ಮಾವನವರಿಗೆ ಹೃದಯದ ತೊಂದರೆಯಾಗಿ ಆರೋಗ್ಯ ಸರಿಹೊಂದುವುದಿಲ್ಲ ಎನ್ನುವ ಸ್ಥಿತಿ ಇದ್ದಾಗ ಹೃದಯ ತಜ್ಞರಾದ ಡಾ.ನಿರಂಜನ್ ನಿಷ್ಠಿ ಯವರ ರೂಪದಲ್ಲಿ ಶರಣಬಸವರು ಬಂದು ಜೀವ ಉಳಿಸಿದಂತಾಯಿತು. ತಮ್ಮಲ್ಲಿ ಬರುವ ಎಲ್ಲಾ ರೋಗಿಗಳಿಗೆ ಮೊದಲು ಶರಣಬಸವರ ಆಶೀರ್ವಾದ ತೆಗೆದುಕೊಂಡು ಬನ್ನಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತೇನೆ ಎಂದು ತಮ್ಮ ಜೀವನದಲ್ಲಿ ನಡೆದ ನಿಜ ಘಟನೆಗಳನ್ನು ಎಳೆ ಎಳೆಯಾಗಿ ತಿಳಿಸಿದರು.

ನಂತರ ಉಪನ್ಯಾಸ ನೀಡಿದ ದೊಡ್ಡಪ್ಪ ಅಪ್ಪ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಧುಮ್ಮಾಳೆ ಮಾತನಾಡಿ, ಎಲ್ಲವನ್ನೂ ಕಳೆದುಕೊಂಡು ಕಲಬುರಗಿಗೆ ಬಂದಾಗ ತಮ್ಮ ಕುಟುಂಬಕ್ಕೆ ಕೈಹಿಡಿದವರು ಶರಣಬಸವೇಶ್ವರರು. ತಾವು ಶೈಕ್ಷಣಿಕವಾಗಿ ಬೆಳೆಯಲು, ಆರ್ಥಿಕವಾಗಿ ಸಬಲರಾಗಲು ಶರಣಬಸವರು ತಮಗೆ ಕಾರಣಕರ್ತರಾಗಿದ್ದಾರೆ. ಪ್ರತಿನಿತ್ಯ ಶರಣಬಸವರಲ್ಲಿ ಭಕ್ತಿ, ಶ್ರದ್ಧೆಯಿಂದ ಬೇಡಿಕೊಂಡಿದ್ದೇನೆ ಎಲ್ಲವನ್ನೂ ಶರಣಬಸವರು ದಯಪಾಲಿಸಿದ್ದಾರೆ. ಶರಣಬಸವೇಶ್ವರರು ತಮ್ಮ ಕುಟುಂಬದಲ್ಲಿ ಎಷ್ಟು ಮುಖ್ಯವಾಗಿ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.